ಸಾರಾಂಶ
ಸೆಮಿಫೈನಲ್‌ನಲ್ಲಿ ಇಗಾ ಹಾಗೂ ಗಾಫ್ ಪರಸ್ಪರ ಸೆಣಸಾಡಲಿದ್ದಾರೆ. ಇಗಾ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಕೊಕೊ ಗಾಫ್ 2ನೇ ಬಾರಿ ಟೂರ್ನಿಯ ಫೈನಲ್‌ಗೇರುವ ಕಾತರದಲ್ಲಿದ್ದಾರೆ.
ಪ್ಯಾರಿಸ್: ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಹಾಗೂ ಚೊಚ್ಚಲ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿರುವ ಅಮೆರಿಕದ ಕೊಕೊ ಗಾಫ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋಲೆಂಡ್‌ನ ಇಗಾ ಅವರು ಚೆಕ್ ಗಣರಾಜ್ಯದ 5ನೇ ಶ್ರೇಯಾಂಕಿತ ಮಾರ್ಕೆಟಾ ವೊಂಡ್ರೊಸೋವಾ ವಿರುದ್ಧ 6-0, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಗಾಫ್ ಟ್ಯುನೀಶಿಯಾದ 8ನೇ ಶ್ರೇಯಾಂಕಿತ ಒನ್ಸ್ ಜಬುರ್ ಅವರನ್ನು 4-6, 6-2, 6-3 ಸೆಟ್‌ಗಳಲ್ಲಿ ಸೋಲಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಇಗಾ ಹಾಗೂ ಗಾಫ್ ಪರಸ್ಪರ ಸೆಣಸಾಡಲಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಕ್ವಾರ್ಟರ್ ಫೈನಲ್‌ಗೇರಿದರು.