ಸಾರಾಂಶ
ನವದೆಹಲಿ: ಜಾವೆಲಿನ್ ಎಸೆತದ ವಿಶ್ವ ದಾಖಲೆ ವೀರ ಚೆಕ್ ಗಣರಾಜ್ಯದ ಯಾನ್ ಜೆಲೆಜ್ನಿ ಅವರು ಡಬಲ್ ಒಲಿಂಪಿಕ್ ಪದಕ ವಿಜೇತ, ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ.
ನೀರಜ್ ಈ ವರೆಗೂ ಜರ್ಮನಿಯ ಕ್ಲಾಸ್ ಬಾರ್ಟೋನಿಟ್ಜ್ ಅವರಿಂದ ತರಬೇತಿ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರಿಂದ ದೂರವಾಗಿದ್ದರು. ಇನ್ನು ಮುಂದೆ 58 ವರ್ಷದ ಜೆಲೆಜ್ನಿ ಜೊತೆ ತರಬೇತಿ ಪಡೆಯಲಿದ್ದೇನೆ ಎಂದು ನೀರಜ್ ಮಾಹಿತಿ ಹಂಚಿಕೊಂಡಿದ್ದಾರೆ. ಜೆಲೆಜ್ನಿ1996ರಲ್ಲಿ 98.48 ಮೀ. ದೂರಕ್ಕೆ ಜಾವೆಲಿನ್ ಎಸೆದಿದ್ದು, ಈಗಲೂ ವಿಶ್ವದಾಖಲೆಯಾಗಿಯೇ ಉಳಿದಿದೆ.
ಅವರು 1992, 1996, 2000ರ ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದಿದ್ದು, 1993, 1995, 2001ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.ಜೆಲೆಜ್ನಿ ಅವರು ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತ ಜಾಕುಬ್ ವೆಡ್ಲೆಚ್, ಕಂಚು ವಿಜೇತ ವಿಟೆಸ್ಲಾವ್ ವೆಸೆಲಿ, 2 ಬಾರಿ ಒಲಿಂಪಿಕ್ ಚಾಂಪಿಯನ್ ಬಾರ್ಬೊರಾ ಸ್ಪೊಟಕೋವಾಗೂ ತರಬೇತಿ ನೀಡಿದ್ದಾರೆ.
ನೀರಜ್‌ಗೆ ಜೆಲೆಜ್ನಿ ಸ್ಫೂರ್ತಿ, ಹೀರೋ
ನೀರಜ್ ಪಾಲಿಗೆ ಜೆಲೆಜ್ನಿಯೇ ‘ಹೀರೋ’. ಜಾವೆಲಿನ್ ಎಸೆತದ ಆರಂಭಿಕ ದಿನಗಳಲ್ಲಿ ಜೆಲೆಜ್ನಿ ಅವರ ಜಾವೆಲಿನ್ ಎಸೆತದ ವಿಡಿಯೋಗಳನ್ನು ನೋಡಿ ಸ್ಫೂರ್ತಿ ಪಡೆದಿದ್ದ ನೀರಜ್‌ಗೆ ಈಗ ತಮ್ಮ ‘ಹೀರೋ’ರಿಂದಲೇ ನೇರವಾಗಿ ಕಲಿಯುವ ಅವಕಾಶ ಲಭಿಸಿದೆ.