ಸಾರಾಂಶ
ಸ್ಟಾಕ್‌ಹೋಮ್: ಡೇವಿಸ್ ಕಪ್ ಟೆನಿಸ್ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಸ್ವೀಡನ್ ವಿರುದ್ಧ 0-4 ಅಂತರದ ಸೋಲು ಎದುರಾಗಿದೆ. ಸ್ವೀಡನ್ ವಿರುದ್ಧ ಭಾರತಕ್ಕಿದು ಡೇವಿಸ್ ಕಪ್‌ನಲ್ಲಿ ಸತತ 6ನೇ ಸೋಲು. ಇದರೊಂದಿಗೆ ಮುಂದಿನ ವರ್ಷ ಭಾರತ, ವಿಶ್ವ ಗುಂಪು-1ರಲ್ಲೇ ಉಳಿಯಲು ಪ್ಲೇ-ಆಫ್ ಪಂದ್ಯದಲ್ಲಿ ಆಡಬೇಕಿದೆ.
ಮೊದಲ ದಿನವಾದ ಶನಿವಾರ ಎರಡು ಸಿಂಗಲ್ಸ್ ಪಂದ್ಯಗಳನ್ನು ಸೋತಿದ್ದ ಭಾರತ, ಭಾನುವಾರ ನಿರ್ಣಾಯಕ ಡಬಲ್ಸ್ ಪಂದ್ಯದಲ್ಲಿ ಸೋಲುಂಡಿತು. ರಾಮ್‌ಕುಮಾರ್ ರಾಮನಾಥನ್ ಹಾಗೂ ಶ್ರೀರಾಮ್ ಬಾಲಾಜಿ ಜೋಡಿಗೆ, ಆ್ಯಂಡ್ರೆ ಗೊರನ್ಸನ್ ಹಾಗೂ ಫಿಲಿಪ್ ಬರ್ಗಿವಿ ವಿರುದ್ಧ 3-6, 4-6 ನೇರ ಸೆಟ್‌ಗಳಲ್ಲಿ ಸೋಲು ಎದುರಾಯಿತು. ಕೇವಲ 1 ಗಂಟೆ 19 ನಿಮಿಷಗಳಲ್ಲಿ ಪಂದ್ಯ ಗೆದ್ದ ಸ್ವೀಡನ್, 3-0 ಅಜೇಯ ಮುನ್ನಡೆ ಸಾಧಿಸಿತು.
ಔಪಚಾರಿಕ ಎನಿಸಿದ್ದ ರಿವರ್ಸ್ ಸಿಂಗಲ್ಸ್‌ನಲ್ಲಿ ಕೇವಲ 1 ಪಂದ್ಯ ನಡೆಯಿತು. ಆಡದ ನಾಯಕ ರೋಹಿತ್ ರಾಜ್‌ಪಾಲ್, ಮಾಜಿ ರಾಷ್ಟ್ರೀಯ ಚಾಂಪಿಯನ್ ಸಿದ್ಧಾರ್ಥ್ ವಿಶ್ವಕರ್ಮ ಅವರನ್ನು ಕಣಕ್ಕಿಳಿಸಿದರು. ಎಲಿಯಸ್ ಎಮೆರ್ ವಿರುದ್ಧ ಸಿದ್ಧಾರ್ಥ್‌ಗೆ 2-6, 2-6 ಸೆಟ್‌ಗಳ ಸೋಲು ಎದುರಾಯಿತು.