ತೂಗುಗತ್ತಿ ಮೇಲೆ ಟೆಸ್ಟ್‌ : ಸೂಪರ್‌ ಕ್ಲೈಮ್ಯಾಕ್ಸ್‌ಗೆ ಕಾಯುತ್ತಿದೆ ಸಿಡ್ನಿ! ಗೆಲ್ಲಲು ಎರಡೂ ತಂಡಗಳಿಗಿದೆ ಅವಕಾಶ

| Published : Jan 05 2025, 01:35 AM IST / Updated: Jan 05 2025, 05:33 AM IST

ತೂಗುಗತ್ತಿ ಮೇಲೆ ಟೆಸ್ಟ್‌ : ಸೂಪರ್‌ ಕ್ಲೈಮ್ಯಾಕ್ಸ್‌ಗೆ ಕಾಯುತ್ತಿದೆ ಸಿಡ್ನಿ! ಗೆಲ್ಲಲು ಎರಡೂ ತಂಡಗಳಿಗಿದೆ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ತೂಗುಗತ್ತಿ ಮೇಲೆ ಸಿಡ್ನಿ ಟೆಸ್ಟ್‌: ಪಂದ್ಯ ಗೆಲ್ಲಲು ಭಾರತ, ಆಸ್ಟ್ರೇಲಿಯಾ ಎರಡೂ ತಂಡಗಳಿಗಿದೆ ಅವಕಾಶ. 2ನೇ ದಿನ ಬರೋಬ್ಬರಿ 15 ವಿಕೆಟ್‌ ಪತನ.

ಸಿಡ್ನಿ: ಭಾರೀ ರೋಚಕತೆಯನ್ನು ಕಾಪಾಡಿಕೊಂಡಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ, ರೋಚಕವಾಗಿ ಅಂತ್ಯಗೊಳ್ಳುವತ್ತ ಸಾಗಿದೆ. ಇಲ್ಲಿ ನಡೆಯುತ್ತಿರುವ 5ನೇ ಟೆಸ್ಟ್‌ ತೂಗುಗತ್ತಿ ಮೇಲಿದ್ದು, ಫಲಿತಾಂಶ ಯಾವ ಕಡೆ ಬೇಕಿದ್ದರೂ ವಾಲಬಹುದು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 185 ರನ್‌ಗೆ ಆಲೌಟ್‌ ಆದರೂ, ಆಸ್ಟ್ರೇಲಿಯಾವನ್ನು 181 ರನ್‌ಗೆ ಕಟ್ಟಿಹಾಕಿ 4 ರನ್‌ ಮುನ್ನೆಡೆ ಪಡೆಯಲು ಸಫಲವಾದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಆತಿಥೇಯರಿಗೆ ಸ್ಪರ್ಧಾತ್ಮಕ ಗುರಿ ನೀಡುವ ನಿರೀಕ್ಷೆಯಲ್ಲಿದೆ.

2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 141 ರನ್‌ ಗಳಿಸಿ, ಒಟ್ಟಾರೆ 145 ರನ್‌ ಮುನ್ನಡೆ ಪಡೆದಿರುವ ಭಾರತ 3ನೇ ದಿನವಾದ ಭಾನುವಾರ ಆ ಮೊತ್ತಕ್ಕೆ ಇನ್ನಷ್ಟು ರನ್‌ ಸೇರಿಸಿ, ಗೆಲುವು ಆತಿಥೇಯರ ಕೈಗೆಟುಕದಂತೆ ನೋಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಆ ಯೋಜನೆ ಕೈಹಿಡಿದರೆ, ಸರಣಿ ಡ್ರಾಗೊಳ್ಳಲಿದ್ದು, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಭಾರತೀಯರ ಬಳಿಯೇ ಉಳಿಯಲಿದೆ. ಒಂದು ವೇಳೆ ಭಾರತಕ್ಕೆ ಸೋಲು ಎದುರಾದರೆ, ದಶಕದ ಬಳಿಕ ಟೀಂ ಇಂಡಿಯಾ ವಿರುದ್ಧ ಸರಣಿ ಗೆದ್ದ ಸಂಭ್ರಮದಲ್ಲಿ ಆಸ್ಟ್ರೇಲಿಯನ್ನರು ತೇಲಲಿದ್ದಾರೆ. ಜೊತೆಗೆ ಕಾಂಗರೂ ಪಡೆಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೂ ಪ್ರವೇಶ ಸಿಗಲಿದೆ. 15 ವಿಕೆಟ್‌ ಪತನ: ಸಿಡ್ನಿ ಕ್ರಿಕೆಟ್‌ ಗ್ರೌಂಡ್ಸ್‌ (ಎಸ್‌ಸಿಜಿ) ಪಿಚ್‌ ಶನಿವಾರ 15 ವಿಕೆಟ್‌ ಪತನಕ್ಕೆ ಸಾಕ್ಷಿಯಾಯಿತು. ಪಿಚ್‌ ಅನಿರೀಕ್ಷಿತ ಬೌನ್ಸ್‌ ಹೊಂದಿದ್ದು, ಸ್ಥಳೀಯ ವಾತಾವರಣ ಸ್ವಿಂಗ್‌ ಬೌಲಿಂಗ್‌ಗೆ ಅನುಕೂಲಕರವಾಗಿದೆ. ಹೀಗಾಗಿ, ಎರಡೂ ತಂಡಗಳ ವೇಗಿಗಳು ಶನಿವಾರ ಹೆಚ್ಚು ಪರಿಣಾಮಕಾರಿಯಾದರು.

ದಿನದಾಟದ ಆರಂಭದಲ್ಲಿ ಮಾರ್ನಸ್‌ ಲಬುಶೇನ್‌ಗೆ ಪೆವಿಲಿಯನ್‌ ದಾರಿ ತೋರಿಸುವ ಮೂಲಕ ಬೂಮ್ರಾ ಶುಭಾರಂಭ ಮಾಡಿದ ಬಳಿಕ, ಪ್ರಸಿದ್ಧ್‌ ಕೃಷ್ಣ, ಮೊಹಮದ್‌ ಸಿರಾಜ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಬೂಮ್ರಾ ಬೆನ್ನು ನೋವಿನ ಸಮಸ್ಯೆಯಿಂದಾಗಿ ಮೈದಾನದಿಂದ ಹೊರನಡೆದ ಬಳಿಕವೂ ಉಳಿದ ಮೂವರು ಆಸ್ಟ್ರೇಲಿಯನ್ನರನ್ನು ನಿಯಂತ್ರಿಸುವಲ್ಲಿ ಹಿಂದೆ ಬೀಳಲಿಲ್ಲ. ಬೂಮ್ರಾ ಬಿಟ್ಟು ಉಳಿದ ಮೂವರು ವೇಗಿಗಳು ಒಟ್ಟಾರೆ 132 ರನ್‌ಗೆ 8 ವಿಕೆಟ್‌ ಕಬಳಿಸಿದರು. ಈ ಪ್ರವಾಸದಲ್ಲೇ ಇದು ಶ್ರೇಷ್ಠ ಪ್ರದರ್ಶನ ಎನಿಸಿತು. ಆಕ್ರಮಣಕಾರಿ ಆಟ: ಆಸ್ಟ್ರೇಲಿಯಾವನ್ನು ಆಲೌಟ್‌ ಮಾಡಿದ 2ನೇ ಇನ್ನಿಂಗ್ಸ್‌ಗೆ ಕಾಲಿಟ್ಟ ಭಾರತ, ಆಕ್ರಮಣಕಾರಿ ಆಟಕ್ಕಿಳಿಯಿತು. ಇನ್ನಿಂಗ್ಸ್‌ನ ಮೊದಲ ಓವರಲ್ಲೇ ಸ್ಟಾರ್ಕ್‌ಗೆ 4 ಬೌಂಡರಿ ಚಚ್ಚಿದ ಯಶಸ್ವಿ ಜೈಸ್ವಾಲ್‌ ತಂಡದ ಉದ್ದೇಶವನ್ನು ಸ್ಪಷ್ಟಪಡಿಸಿದರು. ರಾಹುಲ್‌ರ ಬ್ಯಾಟ್‌ನಿಂದಲೂ ಕೆಲ ಆಕರ್ಷಕ ಬೌಂಡರಿಗಳು ಬಂದವು. ಆದರೆ, ಸ್ಕಾಟ್‌ ಬೋಲೆಂಡ್‌ ತಮ್ಮ ನಿಖರ ದಾಳಿಯ ಮೂಲಕ ಭಾರತೀಯ ಆರಂಭಿಕರನ್ನು ಪೆವಿಲಿಯನ್‌ಗಟ್ಟಿದರು. ರಿಷಭ್‌ ಪಂತ್‌ ಕ್ರೀಸ್‌ಗಿಳಿಯುತ್ತಿದ್ದಂತೆ ಬೌಂಡರಿ, ಸಿಕ್ಸರ್‌ಗಳನ್ನು ಚಚ್ಚಲು ಶುರುವಿಟ್ಟರು.

ಈ ನಡುವೆ ವಿರಾಟ್‌ ಕೊಹ್ಲಿಯ ವಿಕೆಟ್‌ ಭಾರತಕ್ಕೆ ಹಿನ್ನಡೆ ಉಂಟು ಮಾಡಿತು. ಶುಭ್‌ಮನ್‌ ಗಿಲ್‌ ಸಹ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಆದರೆ, ಪಂತ್‌ ಕೇವಲ 29 ಎಸೆತದಲ್ಲಿ ಅರ್ಧಶತಕ ಪೂರೈಸಿ ಆಸ್ಟ್ರೇಲಿಯನ್ನರಲ್ಲಿ ನಡುಕ ಹುಟ್ಟಿಸಿದರು.

ಪಂತ್‌ರ ಅಬ್ಬರದ ಆಟ, ಆಸ್ಟ್ರೇಲಿಯಾ ಬೌಲರ್‌ಗಳು ಟಿ20 ಮಾದರಿಯ ಲೈನ್‌ ಹಾಗೂ ಲೆಂಥ್‌ನ ಮೊರೆ ಹೋಗುವಂತೆ ಮಾಡಿತು. ಪ್ಯಾಟ್‌ ಕಮಿನ್ಸ್‌ ಆಫ್‌ ಸ್ಟಂಪ್‌ನಿಂದ ಬಹಳ ಹೊರಗೆ, ಶಾರ್ಟ್‌ ಪಿಚ್ಡ್‌ ಎಸೆತವನ್ನು ಬೌಲ್‌ ಮಾಡಿದಾಗ ಅದನ್ನು ಅಟ್ಟಾಡಿಸಿ ಹೊಡೆಯಲು ಹೋಗಿ ಪಂತ್‌ ವಿಕೆಟ್‌ ಕಳೆದುಕೊಂಡರು. 33 ಎಸೆತದಲ್ಲಿ 6 ಬೌಂಡರಿ, 4 ಸಿಕ್ಸರ್‌ನೊಂದಿಗೆ 61 ರನ್‌ ಗಳಿಸಿ ಹೊರನಡೆದರು. ನಿತೀಶ್‌ ಕೂಡ ಹೆಚ್ಚು ಹೊತ್ತು ನೆಲೆಯೂರಲಿಲ್ಲ. ಜಡೇಜಾ ಹಾಗೂ ವಾಷಿಂಗ್ಟನ್‌ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡರು.ಸ್ಕೋರ್‌: ಭಾರತ 185 ಹಾಗೂ 141/6 (ಪಂತ್‌ 61, ಜೈಸ್ವಾಲ್‌ 22, ಬೋಲೆಂಡ್‌ 4-42), ಆಸ್ಟ್ರೇಲಿಯಾ 181/10 (ವೆಬ್‌ಸ್ಟರ್‌ 57, ಸ್ಮಿತ್‌ 33, ಪ್ರಸಿದ್ಧ್‌ 3-42, ಸಿರಾಜ್‌ 3-51, ಬೂಮ್ರಾ 2-33, ನಿತೀಶ್‌ 2-32) 

ವೇಗದ ಫಿಫ್ಟಿ: 50 ವರ್ಷದ

ದಾಖಲೆ ಮುರಿದ ಪಂತ್‌!

ಆಸ್ಟ್ರೇಲಿಯಾದಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ಪ್ರವಾಸಿ ತಂಡದ ವಿಕೆಟ್‌ ಕೀಪರ್‌ ಎನ್ನುವ ದಾಖಲೆಯನ್ನು ರಿಷಭ್‌ ಪಂತ್‌ ಬರೆದರು. 29 ಎಸೆತದಲ್ಲಿ ಫಿಫ್ಟಿ ಸಿಡಿಸಿದ ಪಂತ್‌, 50 ವರ್ಷದ ಹಿಂದೆ (1975ರಲ್ಲಿ) 33 ಎಸೆತದಲ್ಲಿ 50 ರನ್‌ ಪೂರೈಸಿದ್ದ ವೆಸ್ಟ್‌ಇಂಡೀಸ್‌ನ ರಾಯ್‌ ಫ್ರೆಡ್ರಿಕ್ಸ್‌ರ ದಾಖಲೆಯನ್ನು ಮುರಿದರು. ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಇದು 2ನೇ ಅತಿವೇಗದ ಅರ್ಧಶತಕ ಎನ್ನುವ ಹಿರಿಮೆಗೂ ಪಾತ್ರವಾಯಿತು. 2017ರಲ್ಲಿ ಸಿಡ್ನಿಯಲ್ಲೇ ಡೇವಿಡ್‌ ವಾರ್ನರ್‌ ಪಾಕಿಸ್ತಾನ ವಿರುದ್ಧ 17 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು.

 32 ವಿಕೆಟ್‌: ಬಿಷನ್‌ ಬೇಡಿ

ದಾಖಲೆ ಮುರಿದ ಬೂಮ್ರಾ!

ಸದ್ಯ ಚಾಲ್ತಿಯಲ್ಲಿರುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ಒಟ್ಟು 32 ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿವೊಂದರಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನ್ನುವ ದಾಖಲೆ ಬರೆದಿದ್ದಾರೆ. 1977ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಿಷನ್‌ ಸಿಂಗ್‌ ಬೇಡಿ 5 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ 31 ವಿಕೆಟ್‌ ಪಡೆದಿದ್ದು, ಈ ಹಿಂದಿನ ದಾಖಲೆ ಎನಿಸಿತ್ತು.