; ಏಷ್ಯನ್‌ ವನಿತಾ ಹಾಕಿ: ಸತತ 5 ಪಂದ್ಯ ಗೆದ್ದು ಭಾರತ ಸೆಮಿಫೈನಲ್‌ಗೆ : ಜಪಾನ್‌ ವಿರುದ್ಧ ಸೆಣಸು

| Published : Nov 18 2024, 12:04 AM IST / Updated: Nov 18 2024, 04:26 AM IST

ಸಾರಾಂಶ

ನಾಳೆ ಸೆಮಿಫೈನಲ್‌ನಲ್ಲಿ ಜಪಾನ್‌ ವಿರುದ್ಧ ಸೆಣಸು. ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾ ತಂಡ ಲೀಗ್‌ ಹಂತದ 3ನೇ ಸ್ಥಾನಿ ಮಲೇಷ್ಯಾ(6 ಅಂಕ) ಜೊತೆಗೆ ಸೆಣಸಾಡಲಿದೆ.

ರಾಜ್‌ಗಿರ್‌(ಬಿಹಾರ): ಹಾಲಿ ಚಾಂಪಿಯನ್ ಭಾರತ ತಂಡ ಭಾನುವಾರ ಇಲ್ಲಿ ನಡೆದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಮಹಿಳೆಯರ ಹಾಕಿ ಟೂರ್ನಿಯ ರೌಂಡ್‌ ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಜಪಾನ್‌ ವಿರುದ್ಧ 3-0 ಅಂತರದಲ್ಲಿ ಗೆದ್ದಿದ್ದು, ಅಜೇಯವಾಗಿಯೇ ಸೆಮಿಫೈನಲ್‌ ಪ್ರವೇಶಿಸಿದೆ.

ಪಂದ್ಯದಲ್ಲಿ ಉಪ ನಾಯಕಿ ನವನೀತ್‌ (37ನೇ ನಿಮಿಷ) ಭಾರತದ ಪರ ಮೊದಲ ಗೋಲು ಬಾರಿಸಿದರು. ಬಳಿಕ ದೀಪಿಕಾ (47 ಮತ್ತು 48ನೇ ನಿಮಿಷ) ಸತತ ಎರಡು ಗೋಲುಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು.ಭಾರತವು ಲೀಗ್‌ ಹಂತದ ಎಲ್ಲ 5 ಪಂದ್ಯಗಳನ್ನು ಗೆಲ್ಲುವ ಮೂಲಕ 15 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಚೀನಾ 12 ಅಂಕಗಳೊಂದಿಗೆ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿತು.2 ಬಾರಿ ಚಾಂಪಿಯನ್‌ ಭಾರತ ಮಂಗಳವಾರ ಸೆಮಿಫೈನಲ್‌ನಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ. ಜಪಾನ್‌ ಲೀಗ್‌ ಹಂತದ 5 ಪಂದ್ಯಗಳಲ್ಲಿ 1 ಗೆಲುವು, 2 ಡ್ರಾ, 2 ಸೋಲಿನೊಂದಿಗೆ 5 ಅಂಕ ಗಳಿಸಿ, 4ನೇ ಸ್ಥಾನ ಪಡೆಯಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಚೀನಾ ತಂಡ ಲೀಗ್‌ ಹಂತದ 3ನೇ ಸ್ಥಾನಿ ಮಲೇಷ್ಯಾ(6 ಅಂಕ) ಜೊತೆಗೆ ಸೆಣಸಾಡಲಿದೆ.