ಭಾರತಕ್ಕೆ ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ಮತ್ತೊಂದು ಪದಕ. 400 ಮೀ. ಟಿ20 ವಿಭಾಗದಲ್ಲಿ ದೀಪ್ತಿ 55.82 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ. ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ 6ನೇ ಪದಕ.

ಪ್ಯಾರಿಸ್‌: ಭಾರತಕ್ಕೆ ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ಮತ್ತೊಂದು ಪದಕ ಲಭಿಸಿದೆ. ಮಂಗಳವಾರ ರಾತ್ರಿ ಮಹಿಳೆಯರ 400 ಮೀ. ಟಿ20 ವಿಭಾಗದಲ್ಲಿ ದೀಪ್ತಿ ಜೀವನ್‌ಜೀ 55.82 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. 

ಸ್ಪರ್ಧೆಯಲ್ಲಿ ಉಕ್ರೇನ್‌ನ ಯುಲಿಯಾ ಶುಲಿಯರ್‌ 55.16 ಸೆಕಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಟರ್ಕಿಯ ಐಸೆಲ್‌ ಒಂಡೆರ್‌ 55.23 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಜಯಿಸಿದರು. ಟಿ20 ಎಂದರೆ ಬೌದ್ಧಿಕ ದುರ್ಬಲತೆ ಹೊಂದಿರುವ ಕ್ರೀಡಾಪಟುಗಳಿಗೆ ಸ್ಪರ್ಧಿಸುವ ವಿಭಾಗ.

06ನೇ ಪದಕ: ಭಾರತ ಈ ಬಾರಿ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ 6ನೇ ಪದಕ ತನ್ನದಾಗಿಸಿಕೊಂಡಿತು.

ಇಂದು ಭವಿನಾ, ರಾಜ್ಯದ ಸಕೀನಾ ಖಾತೂನ್‌ ಸ್ಪರ್ಧೆ

ಪ್ಯಾರಾಲಿಂಪಿಕ್ಸ್‌ನ 7ನೇ ದಿನವಾದ ಬುಧವಾರ ಭಾರತ ಕೆಲ ಸ್ಪರ್ಧೆಗಳಲ್ಲಿ ಪದಕ ನಿರೀಕ್ಷೆಯಲ್ಲಿದೆ. ಟೇಬಲ್‌ ಟೆನಿಸ್‌ ಕ್ವಾರ್ಟರ್ ಫೈನಲ್‌ನಲ್ಲಿ ಭವಿನಾ ಪಟೇಲ್‌, ಪವರ್‌ಲಿಫ್ಟಿಂಗ್‌ನಲ್ಲಿ ರಾಜ್ಯದ ಸಕೀನಾ ಖಾತೂನ್‌, ಪರಮ್‌ಜೀತ್‌ ಕುಮಾರ್‌, ಆರ್ಚರಿ ರೀಕರ್ವ್‌ ಪುರುಷರ ವಿಭಾಗದಲ್ಲಿ ಹರ್ವಿಂದರ್‌ ಸಿಂಗ್‌, ಶಾಟ್‌ಪುಟ್‌ನಲ್ಲಿ ಮೊಹಮದ್‌ ಯಾಸಿರ್‌, ರೋಹಿತ್‌ ಕುಮಾರ್‌, ಸಚಿನ್‌, ಮಹಿಳಾ ವಿಭಾಗದಲ್ಲಿ ಅಮಿಶಾ ರಾವತ್‌, ಕ್ಲಬ್‌ ಥ್ರೋನಲ್ಲಿ ಧರಮ್‌ಬೀರ್‌, ಪ್ರಣವ್‌, ಅಮಿತ್‌, ಮಹಿಳೆಯರ 100 ಮೀ. ರೇಸ್‌ನಲ್ಲಿ ಸಿಮ್ರಾನ್‌ ಸ್ಪರ್ಧಿಸಲಿದ್ದಾರೆ. ಮಿಶ್ರ ಶೂಟಿಂಗ್‌ನ 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ನಿಹಾಲ್‌ ಸಿಂಗ್‌-ರುದ್ರಾನ್ಶ್‌ ಕಣಕ್ಕಿಳಿಯಲಿದ್ದಾರೆ.