ಗೌತಮ್‌ ಗಂಭೀರ್‌ಗೆ ಕೋಚ್‌ ಹುದ್ದೆ ಪಕ್ಕಾ?

| Published : May 29 2024, 12:45 AM IST

ಸಾರಾಂಶ

ಗೌತಮ್‌ ಗಂಭೀರ್‌ಗೆ ಪಕ್ಕಾ ಆಯ್ತಾ ಟೀಂ ಇಂಡಿಯಾ ಕೋಚ್‌ ಹುದ್ದೆ. ಐಪಿಎಲ್‌ ಫೈನಲ್‌ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಜೊತೆ ಗಂಭೀರ್‌ ಏನು ಮಾತಾಡಿದರು? ಗಂಭೀರ್‌ ಹೆಸರು ಫೈನಲ್‌ ಆಗಿದೆ ಎಂದು ಐಪಿಎಲ್‌ ತಂಡವೊಂದರ ಮಾಲಿಕ ಹೇಳಿದ್ದೇಕೆ?

ನವದೆಹಲಿ: ಭಾರತ ತಂಡದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌ ಆಯ್ಕೆಯಾಗಿದ್ದಾರೆ ಎಂದು ಐಪಿಎಲ್‌ ತಂಡವೊಂದರ ಮಾಲಿಕ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದ್ದು, ಸದ್ಯದಲ್ಲೇ ಬಿಸಿಸಿಐ ಗಂಭೀರ್‌ರನ್ನು 3 ವರ್ಷಗಳ ಅವಧಿಗೆ ಕೋಚ್‌ ಆಗಿ ಘೋಷಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬಿಸಿಸಿಐ ಕಾರ್ಯದರ್ಶಿಗೆ ಆಪ್ತರಾಗಿರುವ ಐಪಿಎಲ್‌ ತಂಡವೊಂದರ ಮಾಲಿಕನಿಂದ ಈ ಮಾಹಿತಿ ದೊರೆತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಐಪಿಎಲ್‌ ಫೈನಲ್‌ ಮುಕ್ತಾಯಗೊಂಡ ಬಳಿಕ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹಾಗೂ ಗಂಭೀರ್‌ ಸುದೀರ್ಘ ಚರ್ಚೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಗಂಭೀರ್‌ ‘ದೇಶಕ್ಕಾಗಿ ಮಾಡಲೇಬೇಕಾಗುತ್ತದೆ’ ಎಂದು ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸಿದ್ದು, ಕೋಚ್‌ ಆಗಿ ಕಾರ್ಯನಿರ್ವಹಿಸುವ ಬಗ್ಗೆಯೇ ಮಾತನಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಟಿ20 ವಿಶ್ವಕಪ್‌ ಮುಗಿದ ಬಳಿಕ ರಾಹುಲ್‌ ದ್ರಾವಿಡ್‌ರ ಗುತ್ತಿಗೆ ಅವಧಿ ಮುಕ್ತಾಯಗೊಳ್ಳಲಿದ್ದು, ಹೊಸದಾಗಿ ಕೋಚ್‌ ಆಗುವವರು ಆ ಬಳಿಕ ಹುದ್ದೆ ಅಲಂಕರಿಸಲಿದ್ದಾರೆ. ಹೊಸ ಕೋಚ್‌ 2027ರ ಏಕದಿನ ವಿಶ್ವಕಪ್‌ ವರೆಗೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಈ ಹಿಂದೆಯೇ ಜಯ್‌ ಶಾ ತಿಳಿಸಿದ್ದರು.