ಸಾರಾಂಶ
ಟೈ ಬ್ರೇಕರ್‌ನಲ್ಲಿ ಭಾರತದ ಕೊನೆರು ಹಂಪಿ ವಿರುದ್ಧ ಗೆದ್ದ 19ರ ದಿವ್ಯಾ ದೇಶ್‌ಮುಖ್. ಕಿರೀಟ ಗೆದ್ದ ಅತಿ ಕಿರಿಯೆ ಭಾರತಕ್ಕೆ ಚೊಚ್ಚಲ ವಿಶ್ವಕಪ್. ಗ್ರ್ಯಾಂಡ್‌ಮಾಸ್ಟರ್ ಆದ ದೇಶದ 4ನೇ ಮಹಿಳೆ, ಒಟ್ಟಾರೆ ಭಾರತದ 88ನೇ ಚೆಸ್ ಪಟು ಎಂಬ ಖ್ಯಾತಿ
ಬಟುಮಿ(ಜಾರ್ಜಿಯಾ): ಭಾರತದ ಯುವ ಚೆಸ್ ತಾರೆ ದಿವ್ಯಾ ದೇಶ್‌ಮುಖ್ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಚೆಸ್‌ನ ಅತ್ಯುನ್ನತ ಪಟ್ಟ ಎನಿಸಿಕೊಂಡಿರುವ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
ನಾಗ್ಪುರದ 19 ವರ್ಷದ ದಿವ್ಯಾ ಫೈನಲ್‌ನಲ್ಲಿ ತಮ್ಮ ದೇಶದ ಹಿರಿಯ ಆಟಗಾರ್ತಿ, 38 ವರ್ಷದ ಕೊನೆರು ಹಂಪಿ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸಿದರು. ಶನಿವಾರ, ಭಾನುವಾರ ನಡೆದಿದ್ದ 2 ಗೇಮ್‌ಗಳು ಡ್ರಾಗೊಂಡಿದ್ದರಿಂದ ಸೋಮವಾರ ಟೈ ಬ್ರೇಕರ್ ನಡೆಸಲಾಯಿತು.
ಕಡಿಮೆ ಸಮಯ ನಿಗದಿಪಡಿಸಿ ಆಡಿಸಲಾಗುವ ಟೈ ಬ್ರೇಕರ್‌ನಲ್ಲಿ 1.5-0.5 ಅಂಕಗಳ ಅಂತರದಲ್ಲಿ ಗೆದ್ದ ದಿವ್ಯಾ ವಿಶ್ವಕಪ್ ತಮ್ಮದಾಗಿಸಿಕೊಂಡರು. ಟೈ ಬ್ರೇಕರ್‌ನ ಮೊದಲ ರ್‍ಯಾಪಿಡ್ ಗೇಮ್ ಡ್ರಾಗೊಂಡಿತು. ಆದರೆ ಕಪ್ಪು ಕಾಯಿಗಳೊಂದಿಗೆ 2ನೇ ಗೇಮ್ ಆಡಿದ ದಿವ್ಯಾ ಅಭೂತಪೂರ್ವ ಗೆಲುವಿನೊಂದಿಗೆ ವಿಜಯಮಾಲೆ ಕೊರಳಿಗೇರಿಸಿಕೊಂಡರು.
ಇದರೊಂದಿಗೆ ದೇಶದ ಮೊದಲ ವಿಶ್ವಕಪ್ ವಿಜೇತೆ ಪಟ್ಟ ತಮ್ಮದಾಗಿಸಿಕೊಂಡರು.ಮತ್ತೊಂದೆಡೆ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಟಾನ್ ಝೊಂಗ್ಯಿ ತಮ್ಮದೇ ದೇಶದ ಲೀ ಟಿಂಗ್‌ಜೀ ವಿರುದ್ಧ ಜಯಗಳಿಸಿದರು. ಟೂರ್ನಿಯಲ್ಲಿ ಅಗ್ರ-3 ಸ್ಥಾನಗಳನ್ನು ಪಡೆದ ದಿವ್ಯಾ, ಕೊನೆರು ಹಂಪಿ ಹಾಗೂ ಟಾನ್ ಝೊಂಗ್ಯಿ ಮುಂದಿನ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡರು. ಮಹಿಳಾ ವಿಶ್ವಕಪ್ ಗೆದ್ದ ಅತಿ ಕಿರಿಯ
19 ವರ್ಷದ ದಿವ್ಯಾ ಮಹಿಳಾ ವಿಶ್ವಕಪ್ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡರು. 2023ರಲ್ಲಿ ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋವಾ ತಮಗೆ 20 ವರ್ಷವಾಗಿದ್ದಾಗ ವಿಶ್ವಕಪ್ ಗೆದ್ದಿದ್ದರು. ಅವರನ್ನು ದಿವ್ಯಾ ಹಿಂದಿಕ್ಕಿದರು.
ದಿವ್ಯಾ ಹುಟ್ಟುವ ಮೊದಲೇ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಗೆದ್ದಿದ್ದರು ಕೊನೆರು ಹಂಪಿ!ದಿವ್ಯಾ(19) ತಮಗಿಂತ ದುಪ್ಪಟ್ಟು ವಯಸ್ಸಿನ ಕೊನೆರು ಹಂಪಿ(38 ವರ್ಷ) ಅವರನ್ನು ಮಣಿಸಿ ವಿಶ್ವಕಪ್ ಗೆದ್ದಿದ್ದಾರೆ. ವಿಶೇಷ ಏನೆಂದರೆ, ಕೊನೆರು ಹಂಪಿ ಗ್ರ್ಯಾಂಡ್‌ಮಾಸ್ಟರ್ ಆಗುವಾಗ ದಿವ್ಯಾ ಹುಟ್ಟಿರಲೇ ಇಲ್ಲ. ದಿವ್ಯಾ ಹುಟ್ಟಿದ್ದು 2005ರಲ್ಲಿ. ಅದಕ್ಕೂ ಮುನ್ನ ಅಂದರೆ 2002ರಲ್ಲಿ ಕೊನೆರು ಹಂಪಿ ತಮಗೆ 15 ವರ್ಷವಾಗಿದ್ದಾಗ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದರು.
ಈ ಮೂಲಕ ಗ್ರ್ಯಾಂಡ್‌ಮಾಸ್ಟರ್ ಆದ ವಿಶ್ವದ ಅತಿ ಕಿರಿಯೆ ಎನಿಸಿಕೊಂಡಿದ್ದರು.ಗ್ರ್ಯಾಂಡ್‌ಮಾಸ್ಟರ್ ಪಟ್ಟವೇರಿದ ಭಾರತದ 4ನೇ ಮಹಿಳೆ ದಿವ್ಯಾ!- ದೇಶದ ಒಟ್ಟಾರೆ 88ನೇ ಗ್ರ್ಯಾಂಡ್‌ಮಾಸ್ಟರ್ ಎಂಬ ಹಿರಿಮೆವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲುವುದರೊಂದಿಗೆ ದಿವ್ಯಾ ಗ್ರ್ಯಾಂಡ್‌ಮಾಸ್ಟರ್(ಜಿಎಂ) ಆಗಿ ಹೊರಹೊಮ್ಮಿದರು. ಈಗಾಗಲೇ ಇಂಟರ್‌ನ್ಯಾಷನಲ್ ಮಾಸ್ಟರ್ ಆಗಿದ್ದ ದಿವ್ಯಾ, ಗ್ರ್ಯಾಂಡ್‌ಮಾಸ್ಟರ್ ಆಗಲು ಬೇಕಿದ್ದ 2500 ಎಲೋ ರೇಟಿಂಗ್ ಅಂಕಗಳನ್ನು ಪೂರ್ಣಗೊಳಿಸಿದರು. ಗ್ರ್ಯಾಂಡ್‌ಮಾಸ್ಟರ್ ಆದ ದೇಶದ 4ನೇ ಮಹಿಳೆ, ಒಟ್ಟಾರೆ ಭಾರತದ 88ನೇ ಚೆಸ್ ಪಟು ಎನಿಸಿಕೊಂಡರು.
ಕೊನೆರು ಹಂಪಿ ಗ್ರ್ಯಾಂಡ್‌ಮಾಸ್ಟರ್ ಆದ ಭಾರತದ ಮೊದಲ ಮಹಿಳೆ. 2002ರಲ್ಲಿ ಈ ಸಾಧನೆ ಮಾಡಿದ್ದರು. ಬಳಿಕ 2011ರಲ್ಲಿ ಹರಿಕಾ ದ್ರೋಣವಲ್ಲಿ, 2024ರಲ್ಲಿ ಆರ್.ವೈಶಾಲಿ ಗ್ರ್ಯಾಂಡ್‌ಮಾಸ್ಟರ್ ಆಗಿದ್ದರು. ದೇಶದ ಇತರ 84 ಮಂದಿ ಗ್ರ್ಯಾಂಡ್‌ಮಾಸ್ಟರ್‌ಗಳು ಪುರುಷರು. ವಿಶ್ವನಾಥನ್ ಆನಂದ್(1988) ಭಾರತದ ಮೊದಲ ಗ್ರ್ಯಾಂಡ್‌ಮಾಸ್ಟರ್ ಆಗಿದ್ದು, ಆರ್.ಪ್ರಜ್ಞಾನಂದ, ಡಿ.ಗುಕೇಶ್, ಅರ್ಜುನ್ ಎರಿಗೈಸಿ, ಕರ್ನಾಟಕದ ತೇಜ್‌ಕುಮಾರ್, ಸ್ಟ್ಯಾನಿ, ಪ್ರಣವ್ ಅನಂದ್ ಸೇರಿ ಕೆಲವರು ಈ ಸಾಧನೆ ಮಾಡಿದ್ದಾರೆ.
ಚೆಸ್‌ನಲ್ಲಿ ನಿರ್ದಿಷ್ಟ ಮಾನದಂಡ ತಲುಪಿದವರಿಗೆ ಮಹಿಳಾ ಇಂಟರ್‌ನ್ಯಾಷನಲ್ ಮಾಸ್ಟರ್, ಇಂಟರ್‌ನ್ಯಾಷನಲ್ ಮಾಸ್ಟರ್, ಫಿಡೆ ಮಾಸ್ಟರ್, ಕ್ಯಾಂಡಿಡೇಟ್ಸ್ ಮಾಸ್ಟರ್, ಮಹಿಳಾ ಗ್ರ್ಯಾಂಡ್‌ಮಾಸ್ಟರ್, ಗ್ರ್ಯಾಂಡ್‌ಮಾಸ್ಟರ್ ಗೌರವ ನೀಡಲಾಗುತ್ತದೆ. ಇದರಲ್ಲಿ ಗ್ರ್ಯಾಂಡ್‌ಮಾಸ್ಟರ್ ಎಂಬುದು ಅತ್ಯುನ್ನತ ಪಟ್ಟ.
ವಿಶ್ವಕಪ್ ಗೆದ್ದರೂ ದಿವ್ಯಾ ವಿಶ್ವ ಚಾಂಪಿಯನ್ ಅಲ್ಲ!
ಚೆಸ್‌ನಲ್ಲಿ ವಿಶ್ವಕಪ್ ಬೇರೆ, ವಿಶ್ವ ಚಾಂಪಿಯನ್‌ಶಿಪ್ ಬೇರೆ. ಹೀಗಾಗಿಯೇ ದಿವ್ಯಾ ವಿಶ್ವಕಪ್ ವಿಜೇತೆಯಾಗಿದ್ದರೂ, ವಿಶ್ವ ಚಾಂಪಿಯನ್ ಅಲ್ಲ. ಈ ಎರಡೂ ಟೂರ್ನಿಗಳನ್ನು ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಫಿಡೆ ಆಯೋಜಿಸುತ್ತಿದೆ. ಚೆಸ್ ವಿಶ್ವಕಪ್ ಎಂಬುದು ಒಂದು ಟೂರ್ನಿಯಾಗಿದ್ದು, ಇದರಲ್ಲಿ ಅಗ್ರ-3 ಸ್ಥಾನ ಪಡೆದ ಸ್ಪರ್ಧಿಗಳು ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ. ಇನ್ನಿತರ ಟೂರ್ನಿಗಳಲ್ಲಿ ಗೆದ್ದವರು ಸೇರಿ ಒಟ್ಟು 8 ಮಂದಿ ನಡುವೆ ಕ್ಯಾಂಡಿಡೇಟ್ಸ್ ಟೂರ್ನಿ ನಡೆಯುತ್ತದೆ. ಕ್ಯಾಂಡಿಡೇಟ್ಸ್ ಗೆದ್ದವರು ಹಾಲಿ ವಿಶ್ವ ಚಾಂಪಿಯನ್ ಜೊತೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ. ಭಾರತದ ಮಹಿಳೆಯರು ಒಮ್ಮೆಯೂ ವಿಶ್ವ ಚಾಂಪಿಯನ್ ಆಗಿಲ್ಲ. ಪುರುಷರಲ್ಲಿ ವಿಶ್ವನಾಥನ್ ಆನಂದ್, ಡಿ.ಗುಕೇಶ್ ಮಾತ್ರ ಈ ಸಾಧನೆ ಮಾಡಿದ್ದಾರೆ.
7 ವರ್ಷಕ್ಕೇ ರಾಷ್ಟ್ರೀಯ ಟೂರ್ನಿ ಗೆದ್ದಿದ್ದ ದಿವ್ಯಾ!
ಮಹಾರಾಷ್ಟ್ರದ ನಾಗ್ಪುರದ ವೈದ್ಯ ದಂಪತಿ ಜೀತೇಂದ್ರ-ನಮ್ರತಾರ ಪುತ್ರಿ ದಿವ್ಯಾ 5ನೇ ವಯಸ್ಸಿನಲ್ಲೇ ಚೆಸ್ ಆಡಲು ಆರಂಭಿಸಿದ್ದರು. 7ನೇ ವಯಸ್ಸಿಗೆ ಅಂಡರ್-7 ರಾಷ್ಟ್ರೀಯ ಚಾಂಪಿಯನ್ ಆಗಿದ್ದ ದಿವ್ಯಾ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. 2014ರಲ್ಲಿ ವಿಶ್ವ ಯೂತ್ ಕಿರೀಟ, 2017ರಲ್ಲಿ ಬ್ರೆಜಿಲ್‌ನಲ್ಲಿ ಅಂಡರ್-12 ಚಾಂಪಿಯನ್ ಆದರು. 2021ರಲ್ಲಿ ತಮ್ಮ 15ನೇ ವಯಸ್ಸಿಗೆ ‘ಮಹಿಳಾ ಗ್ರ್ಯಾಂಡ್‌ಮಾಸ್ಟರ್’(ಡಬ್ಲ್ಯುಜಿಎಮ್), 2023ರಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಎನಿಸಿಕೊಂಡರು. ಅಲ್ಲದೆ 3 ಬಾರಿ ಒಲಿಂಪಿಯಾಡ್ ಚಿನ್ನ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಜೂನಿಯರ್ ವಿಶ್ವ ಚಾಂಪಿಯನ್ ಪಟ್ಟ, ವಿಶ್ವ ಯೂತ್ ಚಾಂಪಿಯನ್‌ಶಿಪ್ ಕಿರೀಟ ಕೂಡಾ ಗೆದ್ದಿದ್ದಾರೆ.
ತಾಯಿಯನ್ನು ಬಿಗಿದಪ್ಪಿ ದಿವ್ಯಾ ಆನಂದಬಾಷ್ಪ
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ತಕ್ಷಣ ದಿವ್ಯಾ ಕಣ್ಣಲ್ಲಿ ಆನಂದಬಾಷ್ಪ ಸುರಿಯಿತು. ಬಳಿಕ ಅಲ್ಲೇ ಇದ್ದ ತಾಯಿಯನ್ನು ಭೇಟಿಯಾದ ಅವರು, ಬಿಗಿದಪ್ಪಿ ಗಳಗಳನೆ ಅತ್ತರು. ಇದರ ಫೋಟೋ, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
₹43 ಲಕ್ಷ: ಚಾಂಪಿಯನ್ ಆದ ದಿವ್ಯಾ ₹43 ಲಕ್ಷ ನಗದು ಬಹುಮಾನ ಪಡೆದರು.
₹30 ಲಕ್ಷ: ರನ್ನರ್-ಅಪ್ ಕೊನೆರು ಹಂಪಿಗೆ ₹30 ಲಕ್ಷ ನಗದು ಬಹುಮಾನ ಲಭಿಸಿತು.
ಇದು ಇಬ್ಬರು ಅತ್ಯುತ್ತಮ ಭಾರತೀಯ ಚೆಸ್ ಆಟಗಾರ್ತಿಯರನ್ನು ಒಳಗೊಂಡ ಐತಿಹಾಸಿಕ ಫೈನಲ್.
ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ದಿವ್ಯಾ ದೇಶ್‌ಮುಖ್ ಬಗ್ಗೆ ಹೆಮ್ಮೆಯಿದೆ. ಈ ಗಮನಾರ್ಹ ಸಾಧನೆಗಾಗಿ ಅವರಿಗೆ ಅಭಿನಂದನೆಗಳು. ಅವರ ಸಾಧನೆ ಯುವ ಜನತೆಗೆ ಸ್ಫೂರ್ತಿ. ಕೊನೆರು ಹಂಪಿ ಕೂಡ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇಬ್ಬರ ಭವಿಷ್ಯವೂ ಉಜ್ವಲವಾಗಲಿ.
- ನರೇಂದ್ರ ಮೋದಿ, ಪ್ರಧಾನ ಮಂತ್ರಿನನಗೆ ಈಗ ಮಾತನಾಡಲು ಕಷ್ಟವಾಗುತ್ತಿದೆ. ಇದು ವಿಶೇಷ ಕ್ಷಣ. ಆದರೆ ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ. ಇದು ಕೇವಲ ಆರಂಭ ಎಂದು ನಾನು ಭಾವಿಸುತ್ತೇನೆ. ಈ ಗೆಲುವನ್ನು ಅರಗಿಸಿಕೊಳ್ಳಲು ನನಗೆ ಇನ್ನೂ ಕೆಲವು ಸಮಯ ಬೇಕು. ವಿಶ್ವಕಪ್ ಗೆದ್ದು ಗ್ರ್ಯಾಂಡ್‌ಮಾಸ್ಟರ್ ಪಟ್ಟ ಪಡೆದಿದ್ದ ನನ್ನ ಅದೃಷ್ಟ.
- ದಿವ್ಯಾ ದೇಶ್‌ಮುಖ್, ವಿಶ್ವಕಪ್ ವಿಜೇತೆ