ಐಪಿಎಲ್‌ ಹರಾಜಿಗೆ ಅನುಕೂಲ ಮಾಡಲು 2 ಹಂತದಲ್ಲಿ ರಣಜಿ ಕ್ರಿಕೆಟ್‌

| Published : May 12 2024, 01:15 AM IST / Updated: May 12 2024, 04:30 AM IST

ಐಪಿಎಲ್‌ ಹರಾಜಿಗೆ ಅನುಕೂಲ ಮಾಡಲು 2 ಹಂತದಲ್ಲಿ ರಣಜಿ ಕ್ರಿಕೆಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಮಧ್ಯೆ ಮುಷ್ತಾಕ್‌ ಅಲಿ, ವಿಜಯ್‌ ಹಜಾರೆ ನಡೆಸಲು ಬಿಸಿಸಿಐ ಚಿಂತನೆ. ಇದರಿಂದ ಐಪಿಎಲ್‌ ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ದೇಸಿ ಆಟಗಾರರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ.

ನವದೆಹಲಿ: ಭಾರತದ ಯುವ ಕ್ರಿಕೆಟಿಗರು ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳುವಂತಾಗಲು ರಣಜಿ ಟೂರ್ನಿಯನ್ನು 2 ಹಂತದಲ್ಲಿ ನಡೆಸಲು ಹಾಗೂ ಇದರ ನಡುವೆ ಸೆಯ್ಯದ್‌ ಮುಷ್ತಾಕ್‌ ಅಲಿ ಟಿ20 ಹಾಗೂ ವಿಜಯ್‌ ಹಜಾರೆ ಏಕದಿನ ಟೂರ್ನಿ ನಡೆಸಲು ಬಿಸಿಸಿಐ ಉದ್ದೇಶಿಸಿದೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಕೋಚ್‌ ರಾಹುಲ್‌ ದ್ರಾವಿಡ್‌, ಭಾರತದ ನಾಯಕ ರೋಹಿತ್‌ ಶರ್ಮಾ, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಮಾತುಕತೆ ನಡೆಸಿದ್ದು, ಪ್ರಸ್ತಾವನೆಯನ್ನು ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಮುಂದಿಡಲಾಗಿದೆ. 2024-25ರ ಋತುವಿನಲ್ಲೇ ಇದು ಜಾರಿಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತಾವನೆ ಪ್ರಕಾರ ಅಕ್ಟೋಬರ್‌ನಲ್ಲೇ ರಣಜಿ ಆರಂಭವಾಗಲಿದ್ದು, 5 ಪಂದ್ಯಗಳು ನಡೆಯಲಿವೆ. 

ಬಳಿಕ ಮುಷ್ತಾಕ್‌ ಅಲಿ, ವಿಜಯ್‌ ಹಜಾರೆ ಟೂರ್ನಿ ನಡೆಯಲಿವೆ. ಇದರಿಂದ ಐಪಿಎಲ್‌ ಫ್ರಾಂಚೈಸಿಗಳಿಗೆ ಹರಾಜಿಗೂ ಮುನ್ನ ದೇಸಿ ಆಟಗಾರರ ಮೇಲೆ ನಿಗಾ ಇಡಲು ಸಾಧ್ಯವಾಗಲಿದೆ. ಆ ಬಳಿಕ ರಣಜಿಯ ಉಳಿದ 2 ಪಂದ್ಯಗಳು, ನಾಕೌಟ್‌ ಪಂದ್ಯಗಳು ನಡೆಯಲಿವೆ. ಇನ್ನು, ಆಟಗಾರರು ಗಾಯಗೊಳ್ಳುವುದನ್ನು ತಪ್ಪಿಸಲು ರಣಜಿ ಟೂರ್ನಿ ಮಧ್ಯೆ ವಿಶ್ರಾಂತಿ ದಿನಗಳನ್ನೂ ಹೆಚ್ಚಿಸಲು ಬಿಸಿಸಿಐ ನಿರ್ಧರಿಸಿದೆ.

ಸಿ.ಕೆ.ನಾಯ್ಡು: ಟಾಸ್‌ ರದ್ದು!

ಇನ್ನು, ಸಿ.ಕೆ.ನಾಯ್ಡು ಅಂಡರ್‌-23 ಟೂರ್ನಿಯಲ್ಲಿ ಟಾಸ್‌ ರದ್ದು ಮಾಡಲು ಬಿಸಿಸಿಐ ನಿರ್ಧರಿಸಿದೆ. ಪ್ರವಾಸಿ ತಂಡ ನೇರವಾಗಿ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ. ಇದರಿಂದ ಪಂದ್ಯಗಳು ಏಕಮುಖವಾಗುವುದನ್ನು ತಪ್ಪಿಸಬಹುದು ಎಂಬುದು ಬಿಸಿಸಿಐ ಯೋಜನೆ.