ರೋಚಕ ಘಟ್ಟ ತಲುಪಿದ ದುಲೀಪ್‌ ಟ್ರೋಫಿ ಪಂದ್ಯಗಳು. ಭಾರತ ‘ಎ’ ವಿರುದ್ಧ ಭಾರತ ‘ಡಿ’ಗೆ ಗೆಲ್ಲಲು 488 ರನ್‌ಗಳ ಬೃಹತ್‌ ಗುರಿ. ಭಾರತ ‘ಬಿ’ ವಿರುದ್ಧ ಭಾರತ ‘ಸಿ’ಗೆ ಇನ್ನಿಂಗ್ಸ್‌ ಮುನ್ನಡೆ ನಿರೀಕ್ಷೆ.

ಅನಂತಪುರ: ದುಲೀಪ್‌ ಟ್ರೋಫಿಯಲ್ಲಿ ಭಾರತ ‘ಡಿ’ ವಿರುದ್ಧ ಭಾರತ ‘ಎ’ ಗೆಲುವಿನ ನಿರೀಕ್ಷೆಯಲ್ಲಿದೆ. ಭಾರತ ‘ಡಿ’ಗೆ ಗೆಲ್ಲಲು ಭಾರತ ‘ಎ’ 488 ರನ್‌ಗಳ ಬೃಹತ್‌ ಗುರಿ ನೀಡಿದೆ. ಮೊದಲ ಇನ್ನಿಂಗ್ಸಲ್ಲಿ 290 ರನ್‌ ಗಳಿಸಿದ್ದ ಭಾರತ ‘ಎ’, ಭಾರತ ‘ಡಿ’ ತಂಡವನ್ನು 183ಕ್ಕೆ ಆಲೌಟ್‌ ಮಾಡಿತ್ತು.

 ಬಳಿಕ 2ನೇ ಇನ್ನಿಂಗ್ಸಲ್ಲಿ ಪ್ರಥಮ್‌ ಸಿಂಗ್‌ (122) ಹಾಗೂ ತಿಲಕ್‌ ವರ್ಮಾ (111*)ರ ಶತಕಗಳ ನೆರವಿನಿಂದ 3 ವಿಕೆಟ್‌ಗೆ 380 ರನ್‌ ಕಲೆಹಾಕಿದ ಭಾರತ ‘ಎ’, ದೊಡ್ಡ ಗುರಿ ನೀಡಿತು. 2ನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ‘ಡಿ’, 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 62 ರನ್‌ ಗಳಿಸಿದ್ದು, ಗೆಲ್ಲಲು ಇನ್ನೂ 426 ರನ್‌ ಬೇಕಿದೆ. ಭಾರತ ‘ಸಿ’ಗೆ ಇನ್ನಿಂಗ್ಸ್‌ ಮುನ್ನಡೆ ನಿರೀಕ್ಷೆ

ಭಾರತ ‘ಬಿ’ ವಿರುದ್ಧ ಭಾರತ ‘ಸಿ’ ತಂಡ ಇನ್ನಿಂಗ್ಸ್‌ ಮುನ್ನಡೆ ನಿರೀಕ್ಷೆಯಲ್ಲಿದೆ. ಭಾರತ ‘ಬಿ’ ಗಳಿಸಿದ್ದ 525 ರನ್‌ಗಳಿಗೆ ಉತ್ತರವಾಗಿ 3ನೇ ದಿನದಂತ್ಯಕ್ಕೆ ಭಾರತ ‘ಬಿ’ 7 ವಿಕೆಟ್‌ಗೆ 309 ಗಳಿಸಿದ್ದು, ಇನ್ನೂ 216 ರನ್‌ ಹಿನ್ನಡೆಯಲ್ಲಿದೆ. ಭಾರತ ‘ಬಿ’ ಪರ ನಾಯಕ ಅಭಿಮನ್ಯು ಈಶ್ವರನ್‌, ಏಕಾಂಗಿ ಹೋರಾಟ ನಡೆಸುತ್ತಿದ್ದು ಔಟಾಗದೆ 143 ರನ್‌ ಗಳಿಸಿದ್ದಾರೆ.