ಮಹಿಳೆಯರ 200 ಮೀ. ಸ್ಪರ್ಧೆಯಲ್ಲಿ ಉನ್ನತಿಗೆ ಬಂಗಾರ ಲಭಿಸಿದರೆ, ಚೇತನ್‌ ಪುರುಷರ ವಿಭಾಗದ ಹೈಜಂಪ್‌ನಲ್ಲಿ ಸ್ವರ್ಣ ಸಾಧನೆ ಮಾಡಿದರು.

ಭುವನೇಶ್ವರ: 27ನೇ ರಾಷ್ಟ್ರೀಯ ಫೆಡರೇಶನ್‌ ಕಪ್‌ ಹಿರಿಯರ ಅಥ್ಲೆಟಿಕ್ಸ್‌ ಕೂಟದಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ ಹಾಗೂ ಚೇತನ್‌ ಅವರು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ಕೂಟದ 2ನೇ ದಿನವಾದ ಸೋಮವಾರ ನಡೆದ ಮಹಿಳೆಯರ 200 ಮೀಟರ್‌ ರೇಸ್‌ನಲ್ಲಿ ಉನ್ನತಿ ಅಯ್ಯಪ್ಪ ಅವರು 23.85 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನಿಯಾದರು. 

ಒಡಿಶಾದ ಸ್ರಬಾನಿ ನಂದಾ(23.89 ಮೀ.), ಗುಜರಾತ್‌ನ ದಿವ್ಯಾನಿಬಾ(24.14 ಮೀ.)ಕ್ರಮವಾಗಿ ಬೆಳ್ಳಿ, ಕಂಚಿನ ಪದಕಗಳನ್ನು ಗೆದ್ದುಕೊಂಡರು. ಇದೇ ವೇಳೆ ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕದ ಚೇತನ್‌ ಅವರು ಚಿನ್ನ ಸಂಪಾದಿಸಿದರು. ಅವರು 2.09 ಮೀ. ಎತ್ತರಕ್ಕೆ ನೆಗೆದು ಅಗ್ರಸ್ಥಾನ ಪಡೆದುಕೊಂಡರು. ಒಡಿಶಾದ ಸ್ವಾಧೀನ್‌ ಕುಮಾರ್‌ 2.09 ಮೀಟರ್ ಎತ್ತರಕ್ಕೆ ನೆಗೆದು ಬೆಳ್ಳಿ ಪಡೆದರೆ, ಆಂಧ್ರ ಪ್ರದೇಶದ ಶೇಖ್‌ ಮೊಹಿದ್ದೀನ್‌ 2.05 ಮೀಟರ್‌ನೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 

ಭಾನುವಾರ ಜಾವೆಲಿನ್‌ ಥ್ರೋನಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್‌ ಬೆಳ್ಳಿ ಪದಕ ಜಯಿಸಿದ್ದರು. ಇನ್ನು, ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ, ಕಿಶೋರ್‌ ಜೆನಾ, ಕರ್ನಾಟಕದ ಡಿ.ಪಿ.ಮನು ಫೈನಲ್‌ಗೆ ನೇರ ಪ್ರವೇಶ ಪಡೆದಿದ್ದಾರೆ. ಅವರು ಈಗಾಗಲೇ ಹಲವು ಬಾರಿ ಅರ್ಹತಾ ಮಟ್ಟ(75 ಮೀ.)ವನ್ನು ತಲುಪಿರುವ ಕಾರಣಕ್ಕೆ ನೇರ ಪ್ರವೇಶ ನೀಡಲಾಗಿದೆ. ಮೇ 15ಕ್ಕೆ ಫೈನಲ್‌ ನಡೆಯಲಿದೆ.