ಫಿಫಾ ವಿಶ್ವಕಪ್‌ನ ಅರ್ಹತಾ ಟೂರ್ನಿ: ಆಫ್ಘನ್‌ಗೆ ಶರಣಾದ ಭಾರತ!

| Published : Mar 27 2024, 01:02 AM IST

ಫಿಫಾ ವಿಶ್ವಕಪ್‌ನ ಅರ್ಹತಾ ಟೂರ್ನಿ: ಆಫ್ಘನ್‌ಗೆ ಶರಣಾದ ಭಾರತ!
Share this Article
  • FB
  • TW
  • Linkdin
  • Email

ಸಾರಾಂಶ

ದೀರ್ಘ ಸಮಯದಿಂದ ಭಾರತ ಗೋಲು, ಗೆಲುವಿನ ಬರ ಎದುರಿಸುತ್ತಿದ್ದು, ಈ ಬಾರಿಯಾದರೂ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭರವಸೆ ಮತ್ತೆ ಹುಸಿಯಾಗಿದೆ.

ಗುವಾಹಟಿ: 2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಮತ್ತೆ ಆಘಾತ ಎದುರಾಗಿದೆ. ಮಂಗಳವಾರ 2ನೇ ಸುತ್ತಿನ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ 1-2 ಗೋಲುಗಳಿಂದ ಸೋಲನುಭವಿಸಿತು. 150ನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ಸುನಿಲ್‌ ಚೆಟ್ರಿ 38ನೇ ನಿಮಿಷದಲ್ಲಿ ಗೋಲು ಬಾರಿಸಿದರೂ ಬಳಿಕ ಆಫ್ಘನ್‌ 2 ಗೋಲು ಬಾರಿಸಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ದೀರ್ಘ ಸಮಯದಿಂದ ಭಾರತ ಗೋಲು, ಗೆಲುವಿನ ಬರ ಎದುರಿಸುತ್ತಿದ್ದು, ಈ ಬಾರಿಯಾದರೂ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಭರವಸೆ ಮತ್ತೆ ಹುಸಿಯಾಗಿದೆ.ಇತ್ತೀಚೆಗಷ್ಟೇ ನಡೆದಿದ್ದ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ ಗೋಲು ರಹಿತ ಡ್ರಾಗೊಂಡಿತ್ತು. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ 117ನೇ ಸ್ಥಾನದಲ್ಲಿದ್ದರೆ, ಆಫ್ಘನ್‌ 158ರಲ್ಲಿದೆ. ಭಾರತ ‘ಎ’ ಗುಂಪಿನಲ್ಲಿ ಆಡಿದ 4 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ್ದು, 2 ಸೋಲು, 1 ಡ್ರಾದೊಂದಿಗೆ 4 ಅಂಕ ಸಂಪಾದಿಸಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕತಾರ್‌(14 ಅಂಕ) ಅಗ್ರಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ(4 ಅಂಕ) ಹಾಗೂ ಕುವೈತ್‌(3 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿವೆ.