ಪಿಚ್‌ ಕ್ಯುರೇಟರ್‌ ಒರಟು ಮಾತಿಗೆ ಕೆರಳಿದ ಗಂಭೀರ್‌: ಮೈದಾನದಲ್ಲೇ ಮಾತಿನ ಚಕಮಕಿ

| Published : Jul 30 2025, 12:46 AM IST

ಸಾರಾಂಶ

ಭಾರತದ ಅಭ್ಯಾಸದ ವೇಳೆ ಘಟನೆ. ನಾವೇನು ಮಾಡಬೇಕೆಂದು ನೀವು ಹೇಳಿಕೊಡಬೇಕಾಗಿಲ್ಲ ಎಂದು ಕ್ಯುರೇಟರ್‌ ಲೀ ಫೊರ್ಟಿಸ್‌ ವಿರುದ್ಧ ಕೋಚ್‌ ಗೌತಮ್‌ ಗಂಭೀರ್‌ ಕಿಡಿ

ಲಂಡನ್‌: ಭಾರತ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಓವಲ್‌ ಕ್ರೀಡಾಂಗಣದ ಪಿಚ್‌ ಕ್ಯುರೇಟರ್‌ ಲೀ ಫೊರ್ಟಿಸ್‌ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ. ಭಾರತ ತಂಡದ ಆಟಗಾರರ ಅಭ್ಯಾಸ, ಕೋಚ್‌ಗಳ ಪಿಚ್‌ ಪರಿಶೀಲನೆ ವೇಳೆ ಈ ಘಟನೆ ನಡೆದಿದ್ದು, ಸಹಾಯಕ ಕೋಚ್‌ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.ಯಾವುದೇ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರಿಗೆ ಅಭ್ಯಾಸ ನಡೆಸಲು ಸ್ಥಳ ನಿಗದಿಪಡಿಸುವುದು ಸಾಮಾನ್ಯ. ಮಂಗಳವಾರ ಮೈದಾನದ ಪ್ರವೇಶ ನಿಷೇಧಿತ ಸ್ಥಳದಲ್ಲಿ ಭಾರತೀಯ ಆಟಗಾರರು, ಸಿಬ್ಬಂದಿ ಇರುವುದಕ್ಕೆ ಕ್ಯುರೇಟರ್‌ ಫೊರ್ಟಿಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮ್ಯಾಚ್‌ ರೆಫ್ರಿಗೆ ದೂರು ನೀಡುತ್ತೇನೆ ಎಂದಿದ್ದಾರೆ. ಆದರೆ ಪಿಚ್‌ನಿಂದ ದೂರವಿದ್ದರೂ ಭಾರತದ ಆಟಗಾರರು ಹಾಗೂ ಸಿಬ್ಬಂದಿ ಜೊತೆ ಕ್ಯುರೇಟರ್‌ ಒರಟಾಗಿ ವರ್ತಿಸಿದ್ದಾರೆ ಎಂದು ಗಂಭೀರ್‌ ಕೆರಳಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ. ‘ಇದರ ಬಗ್ಗೆ ನೀವು ಯಾರಿಗೆ ವರದಿ ಕೊಡುತ್ತೀರೋ ಕೊಡಿ. ಆದರೆ ನಾವೇನು ಮಾಡಬೇಕೆಂದು ನೀವು ಹೇಳಿಕೊಡಬೇಕಾಗಿಲ್ಲ. ನೀವು ಮೈದಾನ ಸಿಬ್ಬಂದಿ ಮಾತ್ರ, ಅದಕ್ಕಿಂತ ಹೆಚ್ಚೇನಿಲ್ಲ’ ಎಂದು ಗಂಭೀರ್‌, ಕ್ಯುರೇಟರ್‌ ಫೊರ್ಟಿಸ್‌ರತ್ತ ಬೆರಳು ತೋರಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.ಬಳಿಕ ಭಾರತದ ಬ್ಯಾಟಿಂಗ್‌ ಕೋಚ್‌ ಸೀತಾನ್ಶು ಕೋಟಕ್‌, ಬೌಲಿಂಗ್‌ ಕೋಚ್‌ ಮೋರ್ನೆ ಮೋರ್ಕೆಲ್‌, ಸಹಾಯಕ ಕೊಚ್‌ ರ್‍ಯಾನ್‌ ಟೆನ್‌ ಡೊಶ್ಕಾಟೆ ಮಧ್ಯಪ್ರವೇಶಿಸಿದ್ದಾರೆ. ಸಿತಾನ್ಶು ಅವರು ಕ್ಯುರೇಟರ್‌ ಫೊರ್ಟಿಸ್‌ರನ್ನು ಸ್ವಲ್ಪ ದೂರ ಕರೆದೊಯ್ದು, ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರೂ ಡ್ರೆಸ್ಸಿಂಗ್‌ ರೂಮ್‌ನತ್ತ ಸಾಗಿದ್ದಾರೆ. ಘಟನೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸೀತಾನ್ಶು ಕೋಟಕ್‌ ವಿವರಣೆ ನೀಡಿದ್ದಾರೆ. ‘ನಾವು ಮೈದಾನದಲ್ಲಿದ್ದಾಗ ಕ್ರೀಸ್‌ನಿಂದ 2.5 ಮೀಟರ್‌ ದೂರ ನಿಲ್ಲುವಂತೆ ಸಿಬ್ಬಂದಿಯೊಬ್ಬರು ಬಂದು ಸೂಚಿಸಿದರು. ಈ ರೀತಿ ಯಾವತ್ತೂ ಆಗಿರಲಿಲ್ಲ. ಇದರ ಬಗ್ಗೆ ದೂರು ನೀಡುವ ಅಗತ್ಯವೂ ಇಲ್ಲ. ನಾವು ಸ್ಪೈಕ್ಸ್‌ ಹಾಕಿರಲಿಲ್ಲ. ಮೃದುವಾದ ಶೂ ಧರಿಸಿದ್ದೆವು. ಹೀಗಾಗಿ ನಮ್ಮಿಂದ ಕ್ರೀಸ್‌ಗೆ ಯಾವ ತೊಂದರೆಯೂ ಇರಲಿಲ್ಲ. ಆದರೆ ಕ್ಯುರೇಟರ್‌ ಹೇಗೆ ವರ್ತಿಸುತ್ತಾರೆ ಎಂದು ನಮಗೆ ಮೊದಲೇ ಗೊತ್ತಿತ್ತು’ ಎಂದಿದ್ದಾರೆ. ಇನ್ನು ಘಟನೆ ಬಗ್ಗೆ ಕ್ಯುರೇಟರ್‌ ಫೋರ್ಟಿಸ್‌ ಪ್ರತಿಕ್ರಿಯೆ ನೀಡಿದ್ದು, ‘ಅವರು(ಗಂಭೀರ್‌) ಸ್ವಲ್ಪ ಕಿರಿಕಿರಿ ಕೋಪಗೊಂಡಿದ್ದಾರೆ. ಈ ವಾರ ದೊಡ್ಡ ಪಂದ್ಯವಿದೆ. ಇಂದು ಬೆಳಗ್ಗೆ ಅವರು ಹೇಗಿದ್ದರೆಂದು ನೀವು ನೋಡಿದ್ದೀರಿ. ಇದರ ಬಗ್ಗೆ ನೀವು ಅವರನ್ನೇ ಕೇಳಿ’ ಎಂದಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ಗುರುವಾರದಿಂದ 5ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯಗಳ ಬಳಿಕ ಸದ್ಯ ಇಂಗ್ಲೆಂಡ್‌ ತಂಡ 2-1ರಿಂದ ಸರಣಿ ಮುನ್ನಡೆಯಲ್ಲಿದೆ.

ಪಿಚ್‌ ಪ್ರಾಚೀನ ವಸ್ತುವೇನಲ್ಲ

ಮೈದಾನಕ್ಕೆ ಹಾನಿಯಾಗಬಾರದು ಎಂಬುದು ನಮಗೂ ಗೊತ್ತು. ಆದರೆ ಇದು ಕ್ರಿಕೆಟ್‌ ಪಿಚ್‌. ನಾವು ನಿಂತ ಕೂಡಲೇ ಹಾಳಾಗಲು 200 ವರ್ಷ ಹಳೆಯ ಪ್ರಾಚೀನ ವಸ್ತುವಲ್ಲ. ಬ್ರಷ್‌, ಶೂ ಬಳಸಿ ಪಿಚ್‌ಗೆ ಹಾನಿ ಮಾಡುವುದನ್ನು ನೋಡಿ ಕ್ಯುರೇಟರ್‌ ನಮ್ಮ ಬಳಿ ದೂರ ಸರಿಯಲು ಹೇಳಿದ್ದರೆ ಅದಕ್ಕೊಂದು ಅರ್ಥವಿದೆ. ಆದರೆ ಈ ರೀತಿ ವಿಚಿತ್ರ ವರ್ತನೆ ಸರಿಯಲ್ಲ.- ಸೀತಾನ್ಶು ಕೋಟಕ್‌, ಭಾರತ ಬ್ಯಾಟಿಂಗ್ ಕೋಚ್‌