ಸಾರಾಂಶ
ಶಾರ್ಜಾ: ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಅಫ್ಘಾನಿಸ್ತಾನ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಕೈವಶ ಪಡಿಸಿಕೊಂಡಿದೆ. ಇದು ಹರಿಣ ಪಡೆ ವಿರುದ್ಧ ಆಫ್ಘನ್‌ಗೆ ಚೊಚ್ಚಲ ಸರಣಿ ಗೆಲುವು.
ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆಫ್ಘನ್‌ಗೆ 177 ರನ್ ಬೃಹತ್ ಗೆಲುವು ಲಭಿಸಿತು. ಈ ಮೂಲಕ ಏಕದಿನದಲ್ಲಿ ರನ್ ಅಂತರದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್ 4 ವಿಕೆಟ್‌ಗೆ 311 ರನ್ ಕಲೆಹಾಕಿತು.
ರಹ್ಮಾನುಲ್ಲಾ ಗುರ್ಬಾಜ್(105) 7ನೇ ಶತಕ ಬಾರಿಸಿ, ಏಕದಿನದಲ್ಲಿ ಈ ಸಾಧನೆ ಮಾಡಿದ ಮೊದಲ ಆಫ್ಘನ್ ಆಟಗಾರ ಎನಿಸಿಕೊಂಡರು. ಅಜ್ಮತುಲ್ಲಾ 86, ರಹ್ಮತ್ ಶಾ 50 ರನ್ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ 34.2 ಓವರ್‌ಗಳಲ್ಲಿ 134ಕ್ಕೆ ಆಲೌಟಾಯಿತು. ರಶೀದ್ ಖಾನ್ 19 ರನ್‌ಗೆ 5, ಖರೋಟೆ 26 ರನ್‌ಗೆ 4 ವಿಕೆಟ್ ಪಡೆದರು. ಕೊನೆ ಏಕದಿನ ಭಾನುವಾರ ನಡೆಯಲಿದೆ.
ಅಂಡರ್-19 ಏಕದಿನ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಪುದುಚೇರಿ: ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಅಂಡರ್-19 ತಂಡ 7 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.4 ಓವರ್‌ಗಳಲ್ಲಿ 184 ರನ್ ಗಳಿಗೆ ಆಲೌಟಾಯಿತು. ಸ್ಟೀವ್ ಹೋಗನ್ 42, ರಿಲೀ ಕಿಂಗ್ಸೆಲ್ 36 ರನ್ ಗಳಿಸಿದರು. ಮೊಹಮದ್ ಇನಾನ್ 4 ವಿಕೆಟ್ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಭಾರತ 36 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಕಾರ್ತಿಕೇಯ ಔಟಾಗದೆ 85, ಮೊಹಮದ್ ಅಮಾನ್ ಔಟಾಗದೆ 58 ರನ್ ಗಳಿಸಿದರು.