ಮುಂಬೈ ತಂಡದೊಳಗೆ ರೋಹಿತ್‌ vs ಹಾರ್ದಿಕ್‌ ಪಾಂಡ್ಯ ಬಣ?

| Published : Mar 29 2024, 12:53 AM IST / Updated: Mar 29 2024, 11:30 AM IST

ಸಾರಾಂಶ

ತಂಡದೊಳಗೆ ಈಗಾಗಲೇ ಎರಡು ಬಣ ಸೃಷ್ಟಿ. ಹಾರ್ದಿಕ್‌ರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಅಸಮಾಧಾನ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪದೇಪದೇ ಎಡವಟ್ಟು

ನವದೆಹಲಿ: 17ನೇ ಆವೃತ್ತಿಗೂ ಮುನ್ನ ನಾಯಕನನ್ನು ಬದಲಿಸಿದ 5 ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದೊಳಗೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. 

ತಂಡದೊಳಗೆ ಈಗಾಗಲೇ ಎರಡು ಬಣಗಳಾಗಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ. ಮಾಜಿ ನಾಯಕ ರೋಹಿತ್‌ ಶರ್ಮಾ ಬಣ ಒಂದು ಕಡೆಯಾದರೆ, ಹೊಸದಾಗಿ ನಾಯಕನಾಗಿ ನೇಮಕಗೊಂಡಿರುವ ಹಾರ್ದಿಕ್‌ ಪಾಂಡ್ಯ ಬಣ ಮತ್ತೊಂದು ಕಡೆ ಎಂದು ಹೇಳಲಾಗುತ್ತಿದೆ.

ರೋಹಿತ್‌ ಬಣದಲ್ಲಿ ಜಸ್‌ಪ್ರೀತ್‌ ಬೂಮ್ರಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಸೇರಿ ಇನ್ನೂ ಹಲವರಿದ್ದರೆ, ಹಾರ್ದಿಕ್‌ ಬಣದಲ್ಲಿ ಇಶಾನ್‌ ಕಿಶನ್‌ ಸೇರಿ ಕೆಲವು ಆಟಗಾರರಿದ್ದಾರೆ ಎನ್ನಲಾಗಿದೆ. 

ಇದೇ ವೇಳೆ ಹಾರ್ದಿಕ್‌ರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಅಸಮಾಧಾನವಿದ್ದು, ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

ಇನ್ನೂ ಕೆಲ ಪಂದ್ಯಕ್ಕೆ ಸೂರ್ಯ ಗೈರು?

ನವದೆಹಲಿ: ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವಿಶ್ವ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನ ಮುಂಬೈ ಇಂಡಿಯನ್ಸ್‌ನ ಇನ್ನಷ್ಟು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. 

ಸದ್ಯ 33 ವರ್ಷದ ಸೂರ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿದ್ದು, ಇನ್ನಷ್ಟೇ ಅವರಿಗೆ ಆಡಲು ಅನುಮತಿ ಸಿಗಬೇಕಿದೆ. ಅವರು ಮುಂದಿನ ವಾರ ಮುಂಬೈ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.