ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಭಾರತಕ್ಕೆ ಶರಣಾದ ಪಾಕ್‌ -8 ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ಸೋತಿಲ್ಲ

| Published : Sep 15 2024, 01:47 AM IST / Updated: Sep 15 2024, 04:11 AM IST

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಭಾರತಕ್ಕೆ ಶರಣಾದ ಪಾಕ್‌ -8 ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ಸೋತಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನ ವಿರುದ್ಧ ಭಾರತಕ್ಕೆ 2-1 ಗೋಲುಗಳ ಗೆಲುವು. ಸತತ 5ನೇ ಜಯದೊಂದಿಗೆ ಟೂರ್ನಿಯಲ್ಲಿ ಅಜೇಯವಾಗಿ ಉಳಿದ ಭಾರತ. ಸೆಮೀಸ್‌ನಲ್ಲಿ ಭಾರತಕ್ಕೆ ದಕ್ಷಿಣ ಕೊರಿಯಾ ಎದುರಾಳಿ.

ಹುಲುನ್‌ಬ್ಯುರ್‌(ಚೀನಾ): ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ತಮ್ಮ ಅದ್ಭುತ ಲಯ ಮುಂದುವರಿಸಿದ್ದು, ಬದ್ಧವೈರಿ ಪಾಕಿಸ್ತಾನ ವಿರುದ್ಧ 2 ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವ ಮೂಲಕ, ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಸತತ 5ನೇ ಗೆಲುವು ದಾಖಲಿಸಲು ನೆರವಾದರು. 2-1 ಗೋಲುಗಳ ಗೆಲುವು ಸಾಧಿಸಿದ ಭಾರತ, ಅಜೇಯ ಓಟ ಮುಂದುವರಿಸಿದ್ದು, ಪ್ರಶಸ್ತಿ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇರಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಅಹ್ಮದ್‌ ನದೀಂ 8ನೇ ನಿಮಿಷದಲ್ಲೇ ಗೋಲು ಬಾರಿಸುವ ಮೂಲಕ ಪಾಕಿಸ್ತಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಬಳಿಕ ಹರ್ಮನ್‌ಪ್ರೀತ್‌ 13 ಹಾಗೂ 19ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಭಾರತ ಮುನ್ನಡೆ ಸಾಧಿಸಲು ನೆರವಾದರು. ಪಾಕಿಸ್ತಾನಕ್ಕಿದು ಈ ಟೂರ್ನಿಯಲ್ಲಿ ಮೊದಲ ಸೋಲು. ಈ ಮುಖಾಮುಖಿಗೂ ಮೊದಲೇ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಸೆಮೀಸ್‌ ಪ್ರವೇಶಿಸಿದ್ದವು. ಸೋಮವಾರ ಸೆಮೀಸ್‌ ನಡೆಯಲಿದ್ದು, ಫೈನಲ್‌ ಮಂಗಳವಾರ ನಿಗದಿಯಾಗಿದೆ.

8 ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ಸೋತಿಲ್ಲ ಭಾರತ

ಈ ಗೆಲುವು ಪಾಕಿಸ್ತಾನ ವಿರುದ್ಧ ಭಾರತ ಗೆಲುವಿನ ಓಟ ಮುಂದುವರಿಸಲೂ ಸಹಕಾರಿಯಾಯಿತು. 2016ರ ಬಳಿಕ ಭಾರತ, ಪಾಕ್‌ ವಿರುದ್ಧ ಸೋಲೇ ಕಂಡಿಲ್ಲ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ 10-2ರಲ್ಲಿ ಗೆದ್ದಿತ್ತು.

ಸೆಮೀಸ್‌ ವೇಳಾಪಟ್ಟಿ (ಸೆ.16ಕ್ಕೆ)

1ನೇ ಸೆಮೀಸ್‌ಪಾಕಿಸ್ತಾನ vs ಚೀನಾ

2ನೇ ಸೆಮೀಸ್‌ಭಾರತ vs ದ.ಕೊರಿಯಾ