ಟಿ20 ವಿಶ್ವಕಪ್‌: ಇಂದು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ vs ಸ್ಕಾಟ್ಲೆಂಡ್‌

| Published : Jun 04 2024, 12:32 AM IST / Updated: Jun 04 2024, 04:16 AM IST

ಸಾರಾಂಶ

ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಇಂಗ್ಲೆಂಡ್‌ ಕಾತರ. ಹಾಲಿ ಚಾಂಪಿಯನ್ ತಂಡಕ್ಕೆ ಮೊದಲ ಪಂದ್ಯದಲ್ಲೇ ಶಾಕ್‌ ನೀಡುತ್ತಾ ಸ್ಕಾಟ್ಲೆಂಡ್‌?

ಬ್ರಿಡ್ಜ್‌ಟೌನ್‌: ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಳವಾರ ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ. ದೊಡ್ಡ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.ಇಂಗ್ಲೆಂಡ್‌ ತಂಡದಲ್ಲಿ ತಜ್ಞ ಟಿ20 ಆಟಗಾರರನ್ನು ಹೊಂದಿದ್ದು, ಈ ಸಲವೂ ಟ್ರೋಫಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. 

ನಾಯಕ ಬಟ್ಲರ್‌, ಫಿಲ್‌ ಸಾಲ್ಟ್‌, ಬೇರ್‌ಸ್ಟೋವ್‌, ಹ್ಯಾರಿ ಬ್ರೂಕ್‌, ವಿಲ್‌ ಜ್ಯಾಕ್ಸ್‌, ಲಿವಿಂಗ್‌ಸ್ಟೋನ್‌ ಸೇರಿದಂತೆ ಸ್ಫೋಟಕ ಬ್ಯಾಟರ್‌ಗಳ ದಂಡೇ ಇದ್ದು, ಜೋಫ್ರಾ ಆರ್ಚರ್‌, ಮಾರ್ಕ್‌ ವುಡ್‌, ಟಾಪ್ಲಿ ಸೇರಿದಂತೆ ಮಾರಕ ವೇಗಿಗಳಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಆಲ್ರೌಂಡರ್‌ಗಳೂ ತಂಡದ ಪ್ಲಸ್‌ ಪಾಯಿಂಟ್‌.ಅತ್ತ ಸ್ಕಾಟ್ಲೆಂಡ್‌ ಅರ್ಹತಾ ಸುತ್ತಿನ ಎಲ್ಲಾ 6 ಪಂದ್ಯಗಳಲ್ಲೂ ಗೆದ್ದು ಪ್ರಧಾನ ಸುತ್ತಿಗೇರಿದ್ದು, ಕೆಲ ಪಂದ್ಯಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲೇ ಬಲಿಷ್ಠ ತಂಡಕ್ಕೆ ಸೋಲುಣಿಸುವ ಮೂಲಕ ‘ಬಿ’ ಗುಂಪಿನಲ್ಲಿ ಅಂಕ ಖಾತೆ ತೆರೆಯುವ ಕಾತರದಲ್ಲಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.ಅಫ್ಘಾನಿಸ್ತಾನ vs ಉಗಾಂಡ

ಟಿ20ಯಲ್ಲಿ ಅಪಾಯಕಾರಿ ತಂಡ ಎನಿಸಿಕೊಂಡಿರುವ ಅಫ್ಘಾನಿಸ್ತಾನ ಈ ಬಾರಿ ವಿಶ್ವಕಪ್‌ನಲ್ಲಿ ನಾಕೌಟ್‌ ಪ್ರವೇಶಿಸುವ ಕಾತರದಲ್ಲಿದ್ದು, ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಮಂಗಳವಾರ ಉಗಾಂಡ ವಿರುದ್ಧ ಸೆಣಸಲಿದೆ. ಆಫ್ಘನ್‌ ಬಲಿಷ್ಠವಾಗಿದ್ದರೂ ಉಗಾಂಡವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಚೊಚ್ಚಲ ಬಾರಿ ಟಿ20 ವಿಶ್ವಕಪ್‌ ಆಡುತ್ತಿರುವ ಉಗಾಂಡ ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ.

ಪಂದ್ಯ ಆರಂಭ: ಬೆಳಗ್ಗೆ 6ಕ್ಕೆ ನೆದರ್‌ಲೆಂಡ್ಸ್‌ vs ನೇಪಾಳ 

ಮಂಗಳವಾರ ಮತ್ತೊಂದು ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ಹಾಗೂ ನೇಪಾಳ ಮುಖಾಮುಖಿಯಾಗಲಿವೆ. 2023ರ ವಿಶ್ವಕಪ್‌ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದ ನೆದರ್‌ಲೆಂಡ್ಸ್‌ ಈ ಬಾರಿಯೂ ಮ್ಯಾಜಿಕ್‌ ಮಾಡಲು ಕಾಯುತ್ತಿದೆ. ಆದರೆ ಮರ್ವೆ, ಆ್ಯಕರ್‌ಮನ್‌ ಅನುಪಸ್ಥಿತಿ ತಂಡವನ್ನು ಕಾಡಬಹುದು. ಅತ್ತ ನೇಪಾಳ ತಾರಾ ಆಟಗಾರ ಸಂದೀಪ್‌ ಗೈರಿನಲ್ಲಿ ಕಣಕ್ಕಿಳಿಯಲಿದೆ. ಆದರೆ ಟಿ20ಯಲ್ಲಿ ಕೆಲ ದಾಖಲೆ ಹೊಂದಿರುವ ತಂಡ ಡಚ್‌ ಪಡೆಯನ್ನು ಸೋಲಿಸುವ ನಿರೀಕ್ಷೆಯಲ್ಲಿದೆ.

ಪಂದ್ಯ ಆರಂಭ: ರಾತ್ರಿ 9ಕ್ಕೆ