ನಿಮ್ಮ ಟ್ರೇಡ್‌ಮಾರ್ಕ್ ನಗು ಮಿಸ್‌ ಮಾಡಲಿದ್ದೇವೆ: ಧವನ್‌ ನಿವೃತ್ತಿ ಬಗ್ಗೆ ವಿರಾಟ್‌ ಕೊಹ್ಲಿ

| Published : Aug 26 2024, 01:36 AM IST / Updated: Aug 26 2024, 04:04 AM IST

ಸಾರಾಂಶ

ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಪ್ರತಿಕ್ರಿಯಿಸಿದ್ದು, ಧವನ್‌ಗೆ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ. ರೋಹಿತ್‌ ಕೂಡಾ ಧವನ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ನವದೆಹಲಿ: ಭಾರತದ ಹಿರಿಯ ಆಟಗಾರ ಶಿಖರ್‌ ಧವನ್‌ ನಿವೃತ್ತಿ ಬಗ್ಗೆ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಪ್ರತಿಕ್ರಿಯಿಸಿದ್ದು, ಧವನ್‌ಗೆ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ. 

ಈ ಕುರಿತು ಭಾನುವಾರ ಟ್ವೀಟ್‌ ಮಾಡಿರುವ ಕೊಹ್ಲಿ, ‘ಭಾರತೀಯ ಕ್ರಿಕೆಟ್‌ಗೆ ನಿರ್ಭೀತಿಯಿಂದ ಪಾದಾರ್ಪಣೆ ಮಾಡಿದ್ದ ನೀವು, ಪ್ರಮುಖ ಆರಂಭಿಕ ಆಟಗಾರ ಎನಿಸಿಕೊಳ್ಳುವವರೆಗೆ ಬೆಳೆದಿದ್ದೀರಿ. ನೀವು ಅಸಂಖ್ಯಾತ ನೆನೆಪುಗಳನ್ನು ನೀಡಿದ್ದೀರಿ. ನಿಮ್ಮ ಉತ್ಸಾಹ, ಕ್ರೀಡಾಸ್ಫೂರ್ತಿ ಹಾಗೂ ಟ್ರೇಡ್‌ಮಾರ್ಕ್‌ ಸ್ಮೈಲ್‌ ನಾವು ಮಿಸ್‌ ಮಾಡಿಕೊಳ್ಳಲಿದ್ದೇವೆ’ ಎಂದಿದ್ದಾರೆ.

 ರೋಹಿತ್‌ ಕೂಡಾ ಧವನ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ‘ಡ್ರೆಸ್ಸಿಂಗ್‌ ಕೋಣೆಯಿಂದ ಹಿಡಿದು ಬದುಕಿನುದ್ದಕ್ಕೂ ಬೇಕಾದ ನೆನೆಪುಗಳನ್ನು ಹಂಚಿಕೊಂಡಿದ್ದೀರಿ. ನೀವು ನನ್ನ ಬದುಕನ್ನು ಸರಳವಾಗಿಸಿದ್ದೀರಿ’ ಎಂದು ಬರೆದುಕೊಂಡಿದ್ದಾರೆ. ಧವನ್‌ ಶನಿವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಏಷ್ಯಾ ಬ್ಯಾಡ್ಮಿಂಟನ್‌: ತಾನ್ವಿ ಚಾಂಪಿಯನ್‌

ಚೆಂಗ್ಡು(ಚೀನಾ): ಬ್ಯಾಡ್ಮಿಂಟನ್‌ ಏಷ್ಯಾ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾನ್ವಿ ಪಟ್ರಿ ಚಾಂಪಿಯನ್‌ ಆಗಿದ್ದಾರೆ. 13 ವರ್ಷದ ತಾನ್ವಿ ಭಾನುವಾರ ಬಾಲಕಿಯರ ಅಂಡರ್‌-15 ವಿಭಾಗದ ಫೈನಲ್‌ನಲ್ಲಿ ವಿಯೆಟ್ನಾಂನ ಥಿಥು ಹುಯೆನ್‌ ವಿರುದ್ಧ 22-20, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 

ಒಂದು ಹಂತದಲ್ಲಿ ತಾನ್ವಿ 11-17ರಿಂದ ಹಿಂದಿದ್ದರೂ, ಬಳಿಕ ಪುಟಿದೆದ್ದ ಅವರು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದು ಭಾರತಕ್ಕೆ ಕೂಟದಲ್ಲಿ ಸಿಕ್ಕ 2ನೇ ಪದಕ. ಶನಿವಾರ ಅಂಡರ್‌-17 ಬಾಲಕರ ವಿಭಾಗದಲ್ಲಿ ಜ್ಞಾನಮುತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.