ಸಾರಾಂಶ
ಪುಣೆ: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿರುವ ಹೊರತಾಗಿಯೂ ಆಟಗಾರರ ಬೆನ್ನಿಗೆ ನಿಂತಿರುವ ನಾಯಕ ರೋಹಿತ್ ಶರ್ಮಾ, ಯಾವುದೇ ಆಟಗಾರನ ಸಾಮರ್ಥ್ಯದ ಮೇಲೆ ನನಗೆ ಅನುಮಾನವಿಲ್ಲ ಎಂದಿದ್ದಾರೆ. 2ನೇ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂಡಕ್ಕೆ ಯಾವುದೇ ಪೋಸ್ಟ್‌ಮಾರ್ಟಂ ಅಗತ್ಯವಿಲ್ಲ.
ಆದರೆ ಬ್ಯಾಟರ್‌ಗಳು ಸ್ಪಷ್ಟ ಯೋಜನೆಯೊಂದಿಗೆ ಆಡಬೇಕಾಗಿದೆ. ಇದು ನಾವು ಬಯಸಿದ ಫಲಿತಾಂಶವಲ್ಲ. ನ್ಯೂಜಿಲೆಂಡ್‌ನ ಸವಾಲು ಗೆಲ್ಲಲು ನಮಗೆ ಸಾಧ್ಯವಾಗಲಿಲ್ಲ. ಇದು ಇಡೀ ತಂಡದ ವೈಫಲ್ಯ. ಇದಕ್ಕಾಗಿ ಬ್ಯಾಟರ್ ಅಥವಾ ಬೌಲರ್‌ಗಳನ್ನು ದೂಷಿಸುವುದಿಲ್ಲ.
ವಾಂಖೇಡೆ ಟೆಸ್ಟ್‌ನಲ್ಲಿ ಸ್ಪಷ್ಟ ಗುರಿ ಹಾಗೂ ಯೋಜನೆಯೊಂದಿಗೆ ಆಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸರಣಿ ಸೋತಿದ್ದಕ್ಕೆ ನೋವಿದೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಯೋಚಿಸುತ್ತಾ ಕೂರುವುದಿಲ್ಲ’ ಎಂದು ರೋಹಿತ್ ಹೇಳಿದ್ದಾರೆ.
ತವರಲ್ಲಿ ವರ್ಷದಲ್ಲಿ 3 ಸೋಲು: 83ರ ನಂತರ ಇದೇ ಮೊದಲು
1983ರ ಬಳಿಕ ತವರಿನಲ್ಲಿ ಭಾರತ ತಂಡ ಒಂದು ವರ್ಷದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಸೋತಿರುವುದು ಇದೇ ಮೊದಲು. ಈ ವರ್ಷ ಜನವರಿಯಲ್ಲಿ ಹೈದ್ರಾಬಾದ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯ ಸೋತಿದ್ದ ಭಾರತ, ಇದೀಗ ನ್ಯೂಜಿಲೆಂಡ್ ವಿರುದ್ಧ 2 ಪಂದ್ಯದಲ್ಲಿ ಸೋಲುಂಡಿದೆ.
ಈ ವರ್ಷ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 1983ರಲ್ಲಿ ಭಾರತ ತವರಿನಲ್ಲಿ ಆಡಿದ್ದ 9 ಟೆಸ್ಟ್‌ಗಳಲ್ಲಿ 3ರಲ್ಲಿ ಸೋತು 6 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು. ಅದಕ್ಕೂ ಮುನ್ನ 1969ರಲ್ಲಿ 8 ಪಂದ್ಯಗಳಲ್ಲಿ 2 ಗೆದ್ದು, 4 ಸೋಲುಂಡಿತ್ತು. 2 ಪಂದ್ಯ ಡ್ರಾಗೊಂಡಿತ್ತು.