ಐಸಿಸಿ, ಟಿವಿ ಪ್ರಸಾರಕರಿಗೆ ಈಗ ಭಾರತ vs ಪಾಕ್‌ ಪಂದ್ಯವೇ ಆಸರೆ!

| Published : Jun 06 2024, 12:30 AM IST

ಐಸಿಸಿ, ಟಿವಿ ಪ್ರಸಾರಕರಿಗೆ ಈಗ ಭಾರತ vs ಪಾಕ್‌ ಪಂದ್ಯವೇ ಆಸರೆ!
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ಗೆ ನಿರೀಕ್ಷಿತ ಮಟ್ಟದಲ್ಲಿ ಟೀವಿ ಪ್ರೇಕ್ಷಕರಿಲ್ಲ. ಬಹುತೇಕ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ ನಡೆಯಲಿರುವ ಕಾರಣ ಟೀವಿ ಪ್ರೇಕ್ಷಕರು ಕಡಿಮೆಯಾಗಿದ್ದಾರೆ.

ನ್ಯೂಯಾರ್ಕ್‌: ಈ ಬಾರಿ ಟಿ20 ವಿಶ್ವಕಪ್‌ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಹಾಗೂ ಟಿ20 ವಿಶ್ವಕಪ್‌ನ ಅಧಿಕೃತ ಪ್ರಸಾರಕರು ಟೀವಿ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಜೂ.9ರ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನೇ ಆಯೋಜಕರು, ಪ್ರಸಾರಕರು ನೆಚ್ಚಿಕೊಂಡಿದ್ದಾರೆ.ಕ್ರಿಕೆಟ್‌ಗೆ ಹೆಚ್ಚಿನ ಮಾರುಕಟ್ಟೆ ಇರುವುದು ಭಾರತದಲ್ಲಿ. ಉಳಿದಂತೆ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್‌ನಲ್ಲೂ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭಾರತದ ಪಂದ್ಯಗಳ ಸಮಯ ನಿಗದಿಪಡಿಸಲಾಗಿದೆ. ಇನ್ನುಳಿದ ಬಹುತೇಕ ಪಂದ್ಯಗಳು ಅಮೆರಿಕ ಕಾಲಮಾನದ ಪ್ರಕಾರ ಸಂಜೆ ಹಾಗೂ ರಾತ್ರಿ (ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ) ನಡೆಯಲಿರುವ ಕಾರಣ ಟೀವಿ ಪ್ರೇಕ್ಷಕರು ಕಡಿಮೆಯಾಗಿದ್ದಾರೆ. ಹೀಗಾಗಿ ಸದ್ಯ ಆಯೋಜಕರು ಭಾರತ-ಪಾಕ್‌ ಪಂದ್ಯವನ್ನೇ ನೆಚ್ಚಿಕೊಂಡಿದ್ದು, ಈ ಪಂದ್ಯದ ಮೂಲಕವೇ ಬಹುಪಾಲು ಆದಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. 10 ಸೆಕೆಂಡ್‌ ಜಾಹೀರಾತಿಗೆ ಕನಿಷ್ಠ 50 ಲಕ್ಷ ರು. ನಿಗದಿ?

ಭಾರತ-ಪಾಕ್‌ ಪಂದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ ಈ ಪಂದ್ಯದ ವೇಳೆ ಪ್ರಸಾರಗೊಳ್ಳುವ 10 ಸೆಕೆಂಡ್‌ಗಳ ಜಾಹೀರಾತಿಗೆ ಕನಿಷ್ಠ ₹50 ಲಕ್ಷ ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಈ ವಿಶ್ವಕಪ್‌ನ ಸಾಮಾನ್ಯ ಪಂದ್ಯಗಳ ಜಾಹೀರಾತು ಶುಲ್ಕ 10 ಸೆಕೆಂಡ್‌ಗೆ ₹6 ಲಕ್ಷ ಇದ್ದು, ಇನ್ನುಳಿದ ಪ್ರಮುಖ ಪಂದ್ಯಗಳಿಗೆ ₹12ರಿಂದ 15 ಲಕ್ಷದ ವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಭಾರತ ನಾಕೌಟ್‌ ಹಂತಕ್ಕೇರಿದರೆ, ಆ ಪಂದ್ಯಗಳ ಜಾಹೀರಾತಿಗೆ ಕನಿಷ್ಠ ₹26 ಲಕ್ಷ ನಿಗದಿಯಾಗಬಹುದು ಎನ್ನಲಾಗಿದೆ.