ಏಕದಿನ ಆಲ್ರೌಂಡರ್‌: ನಂ.1 ಸ್ಥಾನದಿಂದ 5 ವರ್ಷಗಳ ಬಳಿಕ ಕೆಳಗಿಳಿದ ಶಕೀಬ್‌!

| Published : Feb 15 2024, 01:15 AM IST / Updated: Feb 15 2024, 01:06 PM IST

Shakib Al Hasan

ಸಾರಾಂಶ

ನೂತನ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಮೊಹಮದ್ ನಬಿ ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಅತಿ ಹಿರಿಯ ಎನಿಸಿಕೊಂಡಿದ್ದಾರೆ. ನಬಿ ಶ್ರೀಲಂಕಾದ ತಿಲಕರತ್ನೆ ದಿಲ್ಶನ್‌ ಅವರ ದಾಖಲೆ ಮುರಿದಿದ್ದಾರೆ.

ದುಬೈ: ಕಳೆದ 5 ವರ್ಷಗಳಿಂದಲೂ ಏಕದಿನ ಕ್ರಿಕೆಟ್‌ನ ಆಲ್ರೌಂಡರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.

ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಶಕೀಬ್‌ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು 2019ರ ಮೇ 7ರಿಂದಲೂ ಅಗ್ರಸ್ಥಾನದಲ್ಲಿದ್ದರು. 1739 ದಿನಗಳ ಅಂದರೆ ನಾಲ್ಕೂವರೆ ವರ್ಷಗಳ ನಂತರ ಶಕೀಬ್ ಅಲ್ ಹಸನ್​ ನಂಬರ್​ 1 ಪಟ್ಟದಿಂದ ಕೆಳಗಿಳಿದಿದ್ದಾರೆ.

ಅಫ್ಘಾನಿಸ್ತಾನದ ಮೊಹಮದ್ ನಬಿ ನಂ.1 ಸ್ಥಾನಕ್ಕೇರಿದ್ದು, ಈ ಸಾಧನೆ ಮಾಡಿದ ಅತಿ ಹಿರಿಯ ಎನಿಸಿಕೊಂಡಿದ್ದಾರೆ. 2015ರ ಜೂನ್​​ನಲ್ಲಿ 38 ವರ್ಷ 8 ತಿಂಗಳ ವಯಸ್ಸಿನ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ನಂಬರ್ 1 ಆಲ್​ರೌಂಡರ್​ ಆಗಿದ್ದರು. 

39 ವರ್ಷ ಮತ್ತು 1 ತಿಂಗಳ ವಯಸ್ಸಿನ ನಬಿ ಅವರು ಈಗ ದಿಲ್ಶನ್‌ ದಾಖಲೆ ಮುರಿದಿದ್ದಾರೆ.ಇನ್ನು, ಕಳೆದ ವಾರ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ, ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. 

ಟೆಸ್ಟ್ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅಶ್ವಿನ್‌ 2, ಅಕ್ಷರ್‌ ಪಟೇಲ್‌ 5ನೇ ಸ್ಥಾನದಲ್ಲಿದ್ದಾರೆ.

ಆಫ್ಘನ್‌ ವಿರುದ್ಧ ಲಂಕಾ 3-0 ಕ್ಲೀನ್‌ಸ್ವೀಪ್‌
ಪಲ್ಲೆಕೆಲೆ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೀಲಂಕಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸಿದೆ. ಬುಧವಾರ ನಡೆದ ಕೊನೆ ಪಂದ್ಯದಲ್ಲಿ ಲಂಕಾ 7 ವಿಕೆಟ್‌ ಜಯಗಳಿಸಿತು. 

ಮೊದಲು ಬ್ಯಾಟ್ ಮಾಡಿದ ಆಫ್ಘನ್‌, ರಹ್ಮತಾ ಶಾ(65), ಅಜ್ಮತುಲ್ಲಾ(54) ಹಾಗೂ ಗುರ್ಬಾಜ್‌ ಹೋರಾಟದ ಹೊರತಾಗಿಯೂ 48.2 ಓವರ್‌ಗಳಲ್ಲಿ 266ಕ್ಕೆ ಆಲೌಟಾಯಿತು. 

ಸ್ಪರ್ಧಾತ್ಮಕ ಗುರಿಯನ್ನು ಶ್ರೀಲಂಕಾ ಸುಲಭದಲ್ಲಿ ಬೆನ್ನತ್ತಿ ಜಯಗಳಿಸಿತು. ಪಥುಂ ನಿಸ್ಸಾಂಕ(118), ಆವಿಷ್ಕಾ ಫೆರ್ನಾಂಡೊ(91) ಆಕರ್ಷಕ ಆಟದಿಂದಾಗಿ ತಂಡಕ್ಕೆ 35.2 ಓವರ್‌ಗಳಲ್ಲಿ ಗೆಲುವು ಲಭಿಸಿತು.