ವಿಂಬಲ್ಡನ್‌ ಸೆಮಿಫೈನಲ್‌ಗೆ ಸ್ವಿಯಾಟೆಕ್‌, ಬೆನ್ಸಿಕ್‌, ಸಿನ್ನರ್‌

| Published : Jul 10 2025, 12:46 AM IST

ಸಾರಾಂಶ

ಚೊಚ್ಚಲ ಬಾರಿ ಅಂತಿಮ 4ರ ಘಟ್ಟ ಪ್ರವೇಶಿಸಿದ ಪೋಲೆಂಡ್‌ನ ಸ್ವಿಯಾಟೆಕ್‌, ಸ್ವಿಜರ್‌ಲೆಂಡ್‌ನ ಬೆನ್ಸಿಕ್‌. ಇಂದು ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಪರಸ್ಪರ ಕಾದಾಟ

ಲಂಡನ್‌: 5 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ತಾರಾ ಆಟಗಾರ್ತಿ ಇಗಾ ಸ್ವಿಯಾಟೆಕ್‌ ಇದೇ ಮೊದಲ ಬಾರಿ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಕಾತರದಲ್ಲಿರುವ ಸ್ವಿಜರ್‌ಲೆಂಡ್‌ನ ಬೆಲಿಂಡಾ ಬೆನ್ಸಿಕ್‌ ಕೂಡಾ ಟೂರ್ನಿಯಲ್ಲಿ ಚೊಚ್ಚಲ ಬಾರಿ ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪೋಲೆಂಡ್‌ನ ಸ್ವಿಯಾಟೆಕ್‌ 19ನೇ ಶ್ರೇಯಾಂಕಿತೆ, ರಷ್ಯಾದ ಲ್ಯುಡ್‌ಮಿಲಾ ಸಮ್ಸೊನೋವಾ ವಿರುದ್ಧ 6-2, 7-5 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 4 ಬಾರಿ ಫ್ರೆಂಚ್‌ ಓಪನ್‌, ಒಂದು ಬಾರಿ ಯುಎಸ್‌ ಓಪನ್‌ ಗೆದ್ದಿರುವ ಸ್ವಿಯಾಟೆಕ್‌ ಈ ಸಲ ವಿಂಬಲ್ಡನ್‌ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಗುರುವಾರ ಸೆಮಿಫೈನಲ್‌ನಲ್ಲಿ ಬೆನ್ಸಿಕ್‌ ವಿರುದ್ಧ ಸೆಣಸಾಡಲಿದ್ದಾರೆ.

28 ವರ್ಷದ ಬೆನ್ಸಿಕ್‌ ಬುಧವಾರ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.7, ರಷ್ಯಾದ ಮಿರ್ರಾ ಆ್ಯಂಡ್ರೀವಾ ವಿರುದ್ಧ ಗೆಲುವು ಸಾಧಿಸಿದರು. ಪಂದ್ಯದಲ್ಲಿ ಬೆನ್ಸಿಕ್‌ 7-6(7/3), 7-6(7/2) ಸೆಟ್‌ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಬೆನ್ಸಿಕ್‌ 2019ರಲ್ಲಿ ಯುಎಸ್‌ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ್ದರು. ಅವರು ತಮ್ಮ ವೃತ್ತಿ ಬದುಕಿನಲ್ಲಿ 2ನೇ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದಾರೆ.