ಮುದ್ದೇನಹಳ್ಳಿ ಸ್ಟೇಡಿಯಂ ಉದ್ಘಾಟನೆ: ಯುವರಾಜ್‌ ಸಿಂಗ್‌ ತಂಡದ ವಿರುದ್ದ ಗೆದ್ದ ಸಚಿನ್‌ ತೆಂಡುಲ್ಕರ್‌ ತಂಡ

| Published : Jan 19 2024, 01:49 AM IST / Updated: Jan 19 2024, 04:49 PM IST

Sachin_Yuvi
ಮುದ್ದೇನಹಳ್ಳಿ ಸ್ಟೇಡಿಯಂ ಉದ್ಘಾಟನೆ: ಯುವರಾಜ್‌ ಸಿಂಗ್‌ ತಂಡದ ವಿರುದ್ದ ಗೆದ್ದ ಸಚಿನ್‌ ತೆಂಡುಲ್ಕರ್‌ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಬಳ್ಳಾಪುರದ ಸತ್ಯಸಾಯಿ ವಿದ್ಯಾಸಂಸ್ಥೆ ಆವರಣದಲ್ಲಿರುವ ನಿರ್ಮಾಣ ಮಾಡಲಾಗಿರುವ ಕ್ರೀಡಾಂಗಣವನ್ನು ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇನಹಳ್ಳಿ(ಚಿಕ್ಕಬಳ್ಳಾಪುರ)

ತಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್‌ ಕ್ರೀಡಾಂಗಣ ಒದಗಿಸುವ ಉದ್ದೇಶದಿಂದ ಮಧುಸೂಧನ್‌ ಸಾಯಿ ಫೌಂಡೇಶನ್‌, ಇಲ್ಲಿನ ಸತ್ಯಸಾಯಿ ವಿದ್ಯಾಸಂಸ್ಥೆಯ ಆವರಣದಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಿದ್ದು, ಅದರ ಉದ್ಘಾಟನೆ ಗುರುವಾರ ನೆರವೇರಿತು. 

ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌ ಹಾಗೂ ಯುವರಾಜ್‌ ಸಿಂಗ್‌ ಕ್ರೀಡಾಂಗಣ ಉದ್ಘಾಟಿಸಿದರು.

ಅಂದಾಜು 1000 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣವು ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಮುಂಬರುವ ದಿನಗಳಲ್ಲಿ ಕರ್ನಾಟಕದ ವಿವಿಧ ವಯೋಮಿತಿಗಳ ತಂಡಗಳು, ಭಾರತೀಯ ತಂಡವು ತನ್ನ ಅಭ್ಯಾಸ ಶಿಬಿರಗಳಲಿಗೆ ಬಳಸಿಕೊಳ್ಳಬಹುದು ಎಂದು ಸಂಸ್ಥೆಯ ಮುಖ್ಯಸ್ಥ ಮಧುಸೂಧನ್‌ ಸಾಯಿ ತಿಳಿಸಿದರು.

ಸಂಸ್ಥೆಯ ಜೊತೆ ವಿಶೇಷ ನಂಟು ಹೊಂದಿರುವ ಭಾರತದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌, ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಮಾಜಿ ಕ್ರಿಕೆಟಿಗರಾದ ಕೃಷ್ಣಮಾಚಾರಿ ಶ್ರೀಕಾಂತ್‌, ಸಯ್ಯದ್‌ ಕಿರ್ಮಾನಿ, ಶ್ರೀಲಂಕಾದ ಅರವಿಂದ ಡಿ ಸಿಲ್ವಾ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಯುವಿ ತಂಡದ ವಿರುದ್ಧ ಗೆದ್ದ ಸಚಿನ್‌ ತಂಡ!‘ 
ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹಲವು ಯೋಜನೆಗಳನ್ನು ಸಂಸ್ಥೆಯು ಕೈಗೊಳ್ಳುತ್ತಿದ್ದು, ಕ್ರೀಡಾಂಗಣ ಉದ್ಘಾಟನೆಗೆ 7 ದೇಶಗಳ ಮಾಜಿ ಕ್ರಿಕೆಟಿಗರನ್ನು ಸೇರಿಸಿ ಎರಡು ತಂಡಗಳನ್ನು ರಚಿಸಿ, ಪ್ರದರ್ಶನ ಪಂದ್ಯವೊಂದನ್ನು ಆಡಿಸಲಾಯಿತು. 

‘ಒನ್‌ ವರ್ಲ್ಡ್‌’ ತಂಡಕ್ಕೆ ಸಚಿನ್‌ ನಾಯಕರಾದರೆ, ‘ಒನ್‌ ಫ್ಯಾಮಿಲಿ’ ತಂಡವನ್ನು ಯುವರಾಜ್ ಮುನ್ನಡೆಸಿದರು. ಯುವಿ ಅವರ ತಂಡ ಮೊದಲು ಬ್ಯಾಟ್‌ ಮಾಡಿ 20 ಓವರಲ್ಲಿ 6 ವಿಕೆಟ್‌ಗೆ 180 ರನ್‌ ಗಳಿಸಿತು. 

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಡ್ಯಾರೆನ್‌ ಮ್ಯಾಡಿ ಅರ್ಧಶತಕ ಬಾರಿಸಿದರು. ಯುವರಾಜ್‌, ಯೂಸುಫ್‌ ಪಠಾಣ್‌ ಆಕರ್ಷಕ ಸಿಕ್ಸರ್‌ಗಳ ಮೂಲಕ ನೆರೆದಿದ್ದ ಅಪಾರ ಸಂಖ್ಯೆಯ ಮಕ್ಕಳು ಹಾಗೂ ಅವರ ಪೋಷಕರನ್ನು ರಂಜಿಸಿದರು.

ಸಚಿನ್‌ರ ತಂಡ 19.5 ಓವರಲ್ಲಿ 6 ವಿಕೆಟ್‌ಗೆ 183 ರನ್‌ ಗಳಿಸಿತು. ಸಚಿನ್‌ (27)ರ ಪ್ರತಿ ರನ್‌ಗೂ ಶಿಳ್ಳೆ, ಚಪ್ಪಾಳೆ ಮೂಡಿಬಂತು. 

ದ.ಆಫ್ರಿಕಾದ ಆ್ಯಲ್ವಿರೋ ಪೀಟರ್‌ಸನ್‌ 50 ಎಸೆತದಲ್ಲಿ 74 ರನ್‌ ಸಿಡಿಸಿದರೆ, ಕೊನೆಯ 2 ಎಸೆತದಲ್ಲಿ 3 ರನ್‌ ಬೇಕಿದ್ದಾಗ ತಮ್ಮ ಹಿರಿಯ ಸಹೋದರ ಯೂಸುಫ್‌ರ ಎಸೆತದಲ್ಲಿ ಇರ್ಫಾನ್‌ ಪಠಾಣ್‌ ಸಿಕ್ಸರ್‌ ಬಾರಿಸಿ, ‘ಒನ್‌ ವರ್ಲ್ಡ್‌’ ತಂಡವನ್ನು ಗೆಲ್ಲಿಸಿದರು.-

ಕನ್ನಡದಲ್ಲಿ ಮಾತು ಆರಂಭಿಸಿದ ಸಚಿನ್‌!

ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದ ಸಚಿನ್‌, ಕನ್ನಡದಲ್ಲೇ ‘ಎಲ್ಲರಿಗೂ ನಮಸ್ಕಾರ’ ಎಂದಾಗ ಕ್ರೀಡಾಂಗಣದಲ್ಲಿದ್ದ ಸಾವಿರಾರು ಪ್ರೇಕ್ಷಕರು ಖುಷಿಯಿಂದ ಸಂಭ್ರಮಿಸಿದರು. ಕ್ರೀಡಾಂಗಣದ ಗುಣಮಟ್ಟವನ್ನು ಕೊಂಡಾಡಿದ ಸಚಿನ್, ಸಂಸ್ಥೆಯ ಉತ್ತಮ ಕಾರ್ಯಕ್ಕೆ ಕೈಜೋಡಿಸಿರುವುದು ಬಹಳ ಖುಷಿ ನೀಡಿದೆ ಎಂದರು.