ಸಿಎಂಆರ್ ವಿವಿ ಕ್ರೀಡಾಂಗಣದ ಪೆವಿಲಿಯನ್‌ ಲೋಕಾರ್ಪಣೆ

| Published : Feb 11 2024, 01:49 AM IST

ಸಾರಾಂಶ

ಬೆಂಗಳೂರು ನಗರದ ಬಾಗಲೂರಿನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ವಿಶ್ವದರ್ಜೆಯ ಸೌಲಭ್ಯವುಳ್ಳ ಕ್ರಿಕೆಟ್ ಸ್ಟೇಡಿಯಂ ಪೆವಿಲಿಯನ್ ಶನಿವಾರ ಲೋಕಾರ್ಪಣೆಯಾಯಿತು.

ಬೆಂಗಳೂರು: ನಗರದ ಬಾಗಲೂರಿನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ವಿಶ್ವದರ್ಜೆಯ ಸೌಲಭ್ಯವುಳ್ಳ ಕ್ರಿಕೆಟ್ ಸ್ಟೇಡಿಯಂ ಪೆವಿಲಿಯನ್ ಇಂದು ಲೋಕಾರ್ಪಣೆಯಾಯಿತು. ಸ್ಟೇಡಿಯಂ ಪೆವಿಲಿಯನ್ ಮತ್ತು ಇಂದು ಆರಂಭಗೊಂಡ ಸಿಎಂಆರ್ ವಿವಿ ಪುರುಷರ ರಾಜ್ಯಮಟ್ಟದ ಅಂತರ ವಿಶ್ವವಿದ್ಯಾಲಯಗಳ ಟಿ೨೦ ಕ್ರಿಕೆಟ್‌ ಟೂರ್ನಮೆಂಟ್‌ಗೆ ಉದ್ಘಾಟಸಿ ಮಾತನಾಡಿದ ಮಾಜಿ ಕ್ರಿಕೆಟಿಗ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಘುರಾಮ್ ಭಟ್, ಸಿಎಂಆರ್ ವಿಶ್ವವಿದ್ಯಾಲಯ ನಿರ್ಮಾಣ ಮಾಡಿರುವ ಕ್ರಿಕೆಟ್ ಸ್ಟೇಡಿಯಂ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಎಲ್ಲಾ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅನುಕೂಲಕರವಾಗಿದೆ.

ಮೊದಲ ಹಂತದಲ್ಲಿ ರಣಜಿ ಸೇರಿದಂತೆ ರಾಜ್ಯಮಟ್ಟದ ಎಲ್ಲಾ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಮತ್ತು ಸ್ಟೇಡಿಯಂ ನಿರ್ವಹಣೆ ಮಾಡುವ ದೃಷ್ಟಿಯಿಂದ ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯಕ್ರಿಕೆಟ್ ಸಂಸ್ಥೆ ನಡುವೆ ಒಪ್ಪಂದವಾಗಿದೆ ಎಂದರು. ಬೆಂಗಳೂರಿನಂತಹ ನಗರದಲ್ಲಿ ಕ್ರಿಕೆಟ್ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದರೆ ಸುಸಜ್ಜಿತಕ್ರಿಕೆಟ್ ಸ್ಟೇಡಿಯಂ ಗಳಿಲ್ಲ, ಹಾಗಾಗಿ ಸಿಎಂಆರ್ ವಿವಿ ನಿರ್ಮಾಣ ಮಾಡಿರುವ ಸ್ಟೇಡಿಯಂ ಎಲ್ಲಾ ದರ್ಜೆಯ ಕ್ರಿಕೆಟ್ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯಕ್ರಿಕೆಟ್ ಸಂಸ್ಥೆ ಸದಾ ಸಿಎಂಆರ್ ವಿಶ್ವವಿದ್ಯಾಲಯದಜೊತೆ ಸಹಕರಿಸುವ ಮೂಲಕ ಸಿಎಂಅರ್ ಯುಕ್ರಿಕೆಟ್ ಸ್ಟೇಡಿಯಂಅನ್ನು ಮುಂದಿನ ಹಂತದಲ್ಲಿ ಬಿಸಿಸಿಐ ಸಹಯೋಗದಲ್ಲಿಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತೇವೆ ಎಂದು ಹೇಳಿದರು.

ಸಿಎಂಆರ್ ವಿಶ್ವವಿದ್ಯಾಲಯ ಹಾಗೂ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಸಿ. ರಾಮಮೂರ್ತಿ ಮಾತನಾಡಿ, ಇಂದು ಕ್ರೀಡೆ ವಿದ್ಯಾರ್ಥಿ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಕ್ರಿಕೆಟ್‌ ವಿಶ್ವ ಮನ್ನಣೆ ಗಳಿಸಿದ ಜನಪ್ರಿಯ ಕ್ರೀಡೆಯಾಗಿದ್ದು, ಅದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ವಿಶ್ವದರ್ಜೆಯ ಸೌಲಭ್ಯವುಳ್ಳ ಸ್ಟೇಡಿಯಂಅನ್ನು ಸಿಎಂಆರ್ ವಿವಿ ಆವರಣದಲ್ಲಿ ನಿರ್ಮಾಣ ಮಾಡಿದ್ದೇವೆ ಎಂದರು.೬ ದಿನಗಳ ಕಾಲ ನಡೆಯುವ ಸಿಎಂಆರ್ ವಿವಿಯ ಪುರುಷರ ಅಂತರ ಟಿ೨೦ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ೧೬ ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಶಂಕರ್, ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ಕೆ.ಸಿಜಗನ್ನಾಥರೆಡ್ಡಿ, ಪ್ರೊ ಚಾನ್ಸಲರ್ ಜಯದೀಪ್‌ ರೆಡ್ಡಿ, ಕುಲಪತಿ ಡಾ.ಎಚ್.ಬಿ ರಾಘವೇಂದ್ರ, ರಿಜಿಸ್ಟ್ರಾರ್‌ ಪ್ರವೀಣ್ ಉಪಸ್ಥಿತರಿದ್ದರು.