ಬಾಜ್‌ಬಾಲ್‌ ವೀರರನ್ನು ಫುಟ್ಬಾಲ್‌ ಆಡಿದ ಭಾರತ!

| Published : Feb 19 2024, 01:34 AM IST

ಸಾರಾಂಶ

ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ನಲ್ಲಿ 434 ರನ್‌ಗಳಿಂದ ಭಾರತ ಜಯಭೇರಿ ಬಾರಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ.

ಟೆಸ್ಟ್‌ನಲ್ಲಿ ಭಾರತಕ್ಕೆ ರನ್‌ ಆಧಾರದಲ್ಲಿ ಅತಿದೊಡ್ಡ ಗೆಲುವು

ರಾಜ್‌ಕೋಟ್‌: ಮೊದಲ ದಿನದ ಮೊದಲ ಅವಧಿಯಲ್ಲಿ 33 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಭಾರತ, 3ನೇ ಟೆಸ್ಟ್‌ ಪಂದ್ಯವನ್ನು ನಾಲ್ಕೇ ದಿನದಲ್ಲಿ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಪಡೆದಿದೆ. ಯಶಸ್ವಿ ಜೈಸ್ವಾಲ್‌ರ ವಿಸ್ಫೋಟಕ ದ್ವಿಶತಕ, ರವೀಂದ್ರ ಜಡೇಜಾ ಹಾಗೂ ಮತ್ತಿತರ ಬೌಲರ್‌ಗಳ ಮೊನಚಾದ ದಾಳಿಯು ಭಾರತಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವನ್ನು ತಂದುಕೊಟ್ಟಿತು.ಎರಡೂ ಇನ್ನಿಂಗ್ಸ್‌ಗಳನ್ನು ಸೇರಿಸಿದರೂ, ಭಾರತ ಮೊದಲ ಇನ್ನಿಂಗ್ಸಲ್ಲಿ ಗಳಿಸಿದ ಮೊತ್ತ (445)ಕ್ಕಿಂತಲೂ 4 ರನ್‌ ಕಡಿಮೆ ಕಲೆಹಾಕಿದ ಇಂಗ್ಲೆಂಡ್‌ (319 ಹಾಗೂ 122), ತನ್ನ ಅತಿಯಾದ ಆಕ್ರಮಣಕಾರಿ (ಬಾಜ್‌ಬಾಲ್‌) ಆಟದ ಸೈಡ್‌ ಎಫೆಕ್ಟ್‌ಗಳೇನು ಎನ್ನುವುದನ್ನು ಅರಿಯಿತು. ಸರಣಿಯಲ್ಲಿ ಬಾಕಿ ಇರುವ 2 ಪಂದ್ಯಗಳಲ್ಲಿ ಇಂಗ್ಲೆಂಡ್‌ ಬಾಜ್‌ಬಾಲ್‌ ಆಟವನ್ನೇ ಮುಂದುವರಿಸುತ್ತದೆಯೇ ಅಥವಾ ಸಾಂಪ್ರದಾಯಿಕ ಟೆಸ್ಟ್‌ ಶೈಲಿಯ ಆಟಕ್ಕೆ ಒತ್ತು ನೀಡಲಿದೆಯೇ ಎನ್ನುವುದು ಈಗ ಎಲ್ಲರಲ್ಲಿರುವ ಕುತೂಹಲ.ಪ್ರವಾಸಿ ತಂಡಗಳ ಉಸಿರುಗಟ್ಟಿಸಿ ಮುಲಾಜಿಲ್ಲದೆ ಹೊಸಕಿ ಹಾಕುವುದು ಭಾರತಕ್ಕೆ ಹೊಸದಲ್ಲ. ಕಳೆದೊಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ತನ್ನ ನೆಲಕ್ಕೆ ಸರಣಿಗಳನ್ನು ಆಡಲು ಬಂದ ತಂಡಗಳನ್ನೆಲ್ಲಾ ‘ಫುಟ್ಬಾಲ್‌’ನಂತೆ ಮೈದಾನದ ಮೂಲೆ ಮೂಲೆಗಟ್ಟಿರುವ ಭಾರತ, ಈ ಸರಣಿಯ ಆರಂಭದಲ್ಲಿ ಇಂಗ್ಲೆಂಡ್‌ ತೋರಿದ ಸಾಹಸದಿಂದ ಸ್ವಲ್ಪ ಮಟ್ಟಿಗೆ ಕುಗ್ಗಿತ್ತು. ಆದರೆ, ಭಾರತ ತಂಡ ಕಳೆದೆರಡು ಪಂದ್ಯಗಳಲ್ಲಿ ತೋರಿದ ಪ್ರದರ್ಶನ, 12 ವರ್ಷಗಳಿಂದ ತವರಿನಲ್ಲಿ ಏಕೆ ಸರಣಿ ಸೋತಿಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನವಷ್ಟೇ.ಇದೇ ಪ್ರದರ್ಶನವನ್ನು ಮುಂದಿನ 2 ಟೆಸ್ಟ್‌ಗಳಲ್ಲೂ ಮುಂದುವರಿಸಿದರೆ, ಸರಣಿಯು ಭಾರತದ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಇಂಗ್ಲೆಂಡ್‌ ಕುಸಿತ:

ಗೆಲ್ಲಲು 557 ರನ್‌ಗಳ ಬೃಹತ್‌ ಗುರಿ ಎದುರಾದಾಗಲೇ ಇಂಗ್ಲೆಂಡ್‌ ಹೆದರಿತು. ಆದರೂ, 5ನೇ ದಿನಕ್ಕೆ ಪಂದ್ಯವನ್ನು ಕೊಂಡೊಯ್ಯುವ ಮೂಲಕ ತಕ್ಕಮಟ್ಟಿಗಿನ ಸಮಾಧಾನ ಗಳಿಸುವ ಲೆಕ್ಕಾಚಾರವೂ ತಲೆಕೆಳಗಾಯಿತು. 7ನೇ ಓವರಲ್ಲಿ ಬೆನ್‌ ಡಕೆಟ್‌ ರನೌಟ್‌ ಆಗುವ ಮೂಲಕ ಆರಂಭಗೊಂಡ ಪೆವಿಲಿಯನ್‌ ಪರೇಡ್‌ ಮುಕ್ತಾಯಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. 50 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌, 100 ರನ್‌ ದಾಟಲು ನೆರವಾಗಿದ್ದು ಮಾರ್ಕ್‌ವುಡ್(15 ಎಸೆತದಲ್ಲಿ 33 ರನ್‌). ತವರು ಮೈದಾನದಲ್ಲಿ ರವೀಂದ್ರ ಜಡೇಜಾ 5 ವಿಕೆಟ್‌ ಕಬಳಿಸಿ ಸಂಭ್ರಮಿಸಿದರು. ಕುಲ್ದೀಪ್‌ಗೆ 2, ಅಶ್ವಿನ್‌ ಹಾಗೂ ಬೂಮ್ರಾಗೆ ತಲಾ 1 ವಿಕೆಟ್‌ ದೊರೆಯಿತು.ಗಿಲ್‌ಗೆ ಒಲಿಯದ ಶತಕ: 3ನೇ ದಿನದಂತ್ಯಕ್ಕೆ 65 ರನ್‌ ಗಳಿಸಿ ಔಟಾಗದೆ ಉಳಿದಿದ್ದ ಶುಭ್‌ಮನ್‌ ಗಿಲ್‌ (91), ಭಾನುವಾರ ಶತಕ ಬಾರಿಸುವ ಧಾವಂತದಲ್ಲಿ ರನೌಟ್‌ ಆದರು. ಶನಿವಾರ ಬೆನ್ನು ನೋವಿನ ಕಾರಣ ‘ರಿಟೈರ್ಡ್‌ ಹರ್ಟ್‌’ ಆಗಿದ್ದ ಯಶಸ್ವಿ ಜೈಸ್ವಾಲ್‌, ಮತ್ತೆ ಕ್ರೀಸ್‌ಗಿಳಿದು ಇಂಗ್ಲೆಂಡ್‌ ಬೌಲರ್‌ಗಳಿಗೆ ಚಳಿ ಬಿಡಿಸಿದರು.ರಾತ್ರಿ ಕಾವಲುಗಾರ ಕುಲ್ದೀಪ್‌ ಯಾದವ್‌ (27) ಔಟಾದ ಮೇಲೆ ಕ್ರೀಸ್‌ಗಿಳಿದ ಸರ್ಫರಾಜ್‌ ಖಾನ್‌ ಹೊಡಿಬಡಿ ಆಟಕ್ಕಿಳಿದರು. ಜೈಸ್ವಾಲ್‌ ದ್ವಿಶತಕ ಬಾರಿಸಿದರೆ, ಸರ್ಫರಾಜ್‌ ಅರ್ಧಶತಕ ಪೂರೈಸಿದರು. 98 ಓವರಲ್ಲಿ, 4.38ರ ರನ್‌ರೇಟ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 430 ರನ್‌ ಗಳಿಸಿ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.ಜೈಸ್ವಾಲ್‌ 236 ಎಸೆತದಲ್ಲಿ 14 ಬೌಂಡರಿ, 12 ಸಿಕ್ಸರ್‌ನೊಂದಿಗೆ ಔಟಾಗದೆ 214 ರನ್‌ ಸಿಡಿಸಿದರೆ, ಸರ್ಫರಾಜ್‌ 72 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ 68 ರನ್‌ ಸಿಡಿಸಿ ಔಟಾಗದೆ ಉಳಿದರು.ಮೊದಲ ಇನ್ನಿಂಗ್ಸಲ್ಲಿ ಶತಕ ಸಿಡಿಸಿ, ಪಂದ್ಯದಲ್ಲಿ ಒಟ್ಟು 7 ವಿಕೆಟ್‌ ಕಿತ್ತ ಜಡೇಜಾ ಪಂದ್ಯ ಶ್ರೇಷ್ಠರಾದರು.ಸ್ಕೋರ್‌: ಭಾರತ 445 ಹಾಗೂ 430/4 ಡಿ., (ಜೈಸ್ವಾಲ್‌ 214*, ಗಿಲ್‌ 91, ಸರ್ಫರಾಜ್‌ 68*, ಹಾರ್ಟ್ಲಿ 1-78), ಇಂಗ್ಲೆಂಡ್‌ 319 ಹಾಗೂ 122/10 (ವುಡ್‌ 33, ಫೋಕ್ಸ್‌ 16, ಜಡೇಜಾ 5-41, ಕುಲ್ದೀಪ್‌ 2-19) ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ.ಭಾರತದ ಅತಿದೊಡ್ಡ ಗೆಲುವುಗಳು (ರನ್‌ ಆಧಾರದಲ್ಲಿ)

434 ಇಂಗ್ಲೆಂಡ್‌ 2024 ರಾಜ್‌ಕೋಟ್‌372 ನ್ಯೂಜಿಲೆಂಡ್‌ 2021 ಮುಂಬೈ337 ದ.ಆಫ್ರಿಕಾ 2015 ದೆಹಲಿ321 ನ್ಯೂಜಿಲೆಂಡ್‌ 2016 ಇಂದೋರ್‌320 ಆಸ್ಟ್ರೇಲಿಯಾ 2008 ಮೊಹಾಲಿ===01 ತಂಡ

ಟೆಸ್ಟ್‌ವೊಂದರ ಎರಡೂ ಇನ್ನಿಂಗ್ಸಲ್ಲಿ 400+ ರನ್‌ ಗಳಿಸಿ, ಪಂದ್ಯವನ್ನು 400+ ರನ್‌ಗಳಿಂದ ಗೆದ್ದ ಮೊದಲ ತಂಡ ಭಾರತ.