ಪ್ಯಾರಿಸ್‌ ಗೇಮ್ಸ್‌ನಲ್ಲಿ 29 ಮೆಡಲ್‌ ಗೆದ್ದು ಚಾರಿತ್ರಿಕ ಸಾಧನೆ: ಶಹಬ್ಬಾಸ್‌ ಪ್ಯಾರಾ ಅಥ್ಲೀಟ್ಸ್‌!

| Published : Sep 09 2024, 01:31 AM IST

ಸಾರಾಂಶ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ತೆರೆ. 7 ಚಿನ್ನ, 9 ಬೆಳ್ಳಿ, 13 ಕಂಚಿನ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು. ಈ ವರೆಗಿನ ಶ್ರೇಷ್ಠ ಪ್ರದರ್ಶನ. ಟೋಕಿಯೋ ಪ್ಯಾರಾಲಿಂಪಿಕ್ಸ್‌ಗಿಂತ 10 ಪದಕ ಹೆಚ್ಚು. ಈ ಸಲ ಪದಕ ಪಟ್ಟಿಯಲ್ಲಿ ಭಾರತಕ್ಕೆ 18ನೇ ಸ್ಥಾನ. ಅಥ್ಲೆಟಿಕ್ಸ್‌ನಲ್ಲಿ ಗರಿಷ್ಠ 17 ಪದಕ

ಪ್ಯಾರಿಸ್: 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ತೆರೆ ಬಿದ್ದಿದೆ. ಕೋಟ್ಯಂತರ ಭಾರತೀಯರ ಹಾರೈಕೆ, ನಿರೀಕ್ಷೆಗಳ ಮೂಟೆ ಹೊತ್ತುಕೊಂಡು ಪ್ಯಾರಿಸ್‌ ವಿಮಾನವೇರಿದ್ದ ಭಾರತೀಯ ಕ್ರೀಡಾಪಟುಗಳು ಸಾರ್ವಕಾಲಿಕ ಶ್ರೇಷ್ಠ ಪದಕ ಗಳಿಕೆಯ ಮೂಲಕ ತವರಿಗೆ ಮರಳಲು ಸಜ್ಜಾಗಿದ್ದಾರೆ.ಈ ಬಾರಿ ಒಟ್ಟು 29 ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಕೊರಳಿಗೇರಿಸಿಕೊಂಡಿದ್ದಾರೆ. 7 ಚಿನ್ನ, 9 ಬೆಳ್ಳಿ, 13 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 16ನೇ ಸ್ಥಾನ ಪಡೆದಿದೆ. ಇದು ಇತಿಹಾಸದಲ್ಲೇ ಭಾರತ ಗಳಿಸಿದ ಅತ್ಯುತ್ತಮ ಸ್ಥಾನ.ಈ ಸಲ ದಾಖಲೆಯ 84 ಕ್ರೀಡಾಪಟುಗಳನ್ನು ಪ್ಯಾರಿಸ್‌ಗೆ ಕಳುಹಿಸಿದ್ದ ಭಾರತ, 25+ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ ನಮ್ಮ ಕ್ರೀಡಾಪಟುಗಳು 29 ಪದಕ ಸಾಧನೆಗೈದಿದ್ದಾರೆ. ಕೆಲವೊಂದು ಸ್ಪರ್ಧೆಗಳಲ್ಲಿ ಭಾರತೀಯರಿಗೆ ಅಲ್ಪದರಲ್ಲೇ ಪದಕ ಕೈತಪ್ಪಿವೆ.ಭಾರತಕ್ಕೆ ಈ ಬಾರಿಯೂ ಅಥ್ಲೆಟಿಕ್ಸ್‌ನಲ್ಲೇ ಗರಿಷ್ಠ ಪದಕ ಬಂದಿದ್ದು, ವಿವಿಧ ಸ್ಪರ್ಧೆಗಳಲ್ಲಿ ಬರೋಬ್ಬರಿ 17 ಪದಕಗಳು ಒಲಿದಿವೆ. ಉಳಿದಂತೆ ಬ್ಯಾಡ್ಮಿಂಟನ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ 5, ಶೂಟಿಂಗ್‌ನಲ್ಲಿ 4, ಆರ್ಚರಿಯಲ್ಲಿ 2 ಪದಕ ಲಭಿಸಿವೆ. ಜುಡೊ ಸ್ಪರ್ಧೆಯಲ್ಲಿ ಭಾರತ ಈ ಬಾರಿ ಅನಿರೀಕ್ಷಿತ ಪದಕ ಸಾಧನೆ ಮಾಡಿದ್ದು ವಿಶೇಷ.

ಹಿಂದಿನ 12 ಗೇಮ್ಸಲ್ಲಿ ಒಟ್ಟು 31, ಈ ಬಾರಿ 29 ಮೆಡಲ್‌!

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 1968ರಿಂದ 2020ರ ವರೆಗೂ ಒಟ್ಟು 12 ಬಾರಿ ಸ್ಪರ್ಧಿಸಿತ್ತು. ಗೆದ್ದಿದು ಒಟ್ಟು 31 ಪದಕ. ಈ ಬಾರಿ ಬರೋಬ್ಬರಿ 29 ಪದಕಗಳು ಭಾರತದ ತೆಕ್ಕೆಗೆ ಬಿದ್ದಿದೆ. 12 ಪ್ರಯತ್ನಗಳಲ್ಲಿ ಒಟ್ಟು 9 ಚಿನ್ನದ ಪದಕ ಜಯಿಸಿದ್ದ ಭಾರತ, ಈ ಬಾರಿ 7 ಚಿನ್ನದ ಪದಕ ಕೊಳ್ಳೆ ಹೊಡೆದಿದೆ. ಭಾರತ ಈ ವರೆಗಿನ ಎಲ್ಲಾ ಪ್ಯಾರಾಲಿಂಪಿಕ್ಸ್‌ಗಳಲ್ಲಿ ಒಟ್ಟಾರೆ 60 ಪದಕ ಗೆದ್ದಿದೆ.

ಪದಕ ಪಟ್ಟಿಯಲ್ಲಿ ಭಾರತ ನಂ.16: ಈ ವರೆಗಿನ ಶ್ರೇಷ್ಠ

ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದುಕೊಂಡಿತು. ಇದು ಈ ವರೆಗಿನ ಶ್ರೇಷ್ಠ ಪ್ರದರ್ಶನ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 5 ಚಿನ್ನ ಸೇರಿ 19 ಪದಕದೊಂದಿಗೆ 24ನೇ ಸ್ಥಾನ ಪಡೆದಿದ್ದು ಈ ವರೆಗಿನ ಶ್ರೇಷ್ಠ ಪ್ರದರ್ಶನವಾಗಿತ್ತು. ಅದಕ್ಕೂ ಮುನ್ನ 1972ರ 1972ರ ಹೈಡೆಲ್ಬರ್ಗ್(ಜರ್ಮನಿ) ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 1 ಚಿನ್ನ ಗೆದ್ದು 25ನೇ ಸ್ಥಾನ ಪಡೆದಿತ್ತು. -02 ಬಾರಿ: ಭಾರತ ಸತತ ಪ್ಯಾರಾಲಿಂಪಿಕ್ಸ್‌ಗಳಲ್ಲಿ ತಲಾ 10ಕ್ಕಿಂತ ಹೆಚ್ಚು ಪದಕ ಗೆದ್ದಿದೆ.

07 ಚಿನ್ನ: ಭಾರತ 7 ಚಿನ್ನ ಗೆದ್ದಿದೆ. ಇದು ಪ್ಯಾರಾಲಿಂಪಿಕ್ಸ್‌ ಆವೃತ್ತಿಯೊಂದರಲ್ಲಿ ಗರಿಷ್ಠ.

ಈ ಬಾರಿಯೂ ಚೀನಾ ನಂಬರ್‌ 1: 94 ಚಿನ್ನ ಸೇರಿ ಒಟ್ಟು 220 ಪದಕ

ಸತತ 6ನೇ ಪ್ಯಾರಾಲಿಂಪಿಕ್ಸ್‌ನಲ್ಲೂ ಚೀನಾ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಈ ಸಲ ಚೀನಾದ ಕ್ರೀಡಾಪಟುಗಳು ಬರೋಬ್ಬರಿ 94 ಚಿನ್ನ, 76 ಬೆಳ್ಳಿ ಹಾಗೂ 50 ಕಂಚಿನ ಪದಕದೊಂದಿಗೆ ಒಟ್ಟು 220 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗ್ರೇಟ್ ಬ್ರಿಟನ್‌ 47 ಚಿನ್ನದೊಂದಿಗೆ ಒಟ್ಟು 120 ಪದಕ ಗೆದ್ದು 2ನೇ ಸ್ಥಾನಿಯಾದರೆ, ಅಮೆರಿಕ 36 ಚಿನ್ನದೊಂದಿಗೆ 102 ಪದಕ ಗೆದ್ದು ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿತು.ಲಾಸ್‌ ಏಂಜಲೀಸ್‌ನಲ್ಲಿ ಮುಂದಿನ ಪ್ಯಾರಾಲಿಂಪಿಕ್ಸ್‌

2028ರ ಪ್ಯಾರಾಲಿಂಪಿಕ್ಸ್‌ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ. ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ರಾಷ್ಟ್ರವೇ ಪ್ಯಾರಾಲಿಂಪಿಕ್ಸ್‌ ಆಯೋಜಿಸಬೇಕೇಂಬ ನಿಯಮವಿದೆ. 2028ರ ಒಲಿಂಪಿಕ್ಸ್‌ ಆತಿಥ್ಯ ಹಕ್ಕು ಲಾಸ್‌ ಏಂಜಲೀಸ್‌ ಪಡೆದಿರುವುದರಿಂದ ಪ್ಯಾರಾಲಿಂಪಿಕ್ಸ್‌ ಕೂಡಾ ಅಲ್ಲೇ ನಡೆಯಲಿದೆ.

85 ದೇಶಗಳು: ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ 85 ದೇಶಗಳು ಕನಿಷ್ಠ 1 ಪದಕ ಗೆದ್ದಿವೆ.

66 ರಾಷ್ಟ್ರಗಳು: ಪ್ಯಾರಿಸ್‌ ಗೇಮ್ಸ್‌ನಲ್ಲಿ ಕನಿಷ್ಠ 1 ಚಿನ್ನ ಗೆದ್ದ ದೇಶಗಳ ಸಂಖ್ಯೆ 66.

74 ಪದಕಗಳು: ಆತಿಥೇಯ ಫ್ರಾನ್ಸ್‌ ಈ ಬಾರಿ ಒಟ್ಟು 74 ಪದಕ ಗೆದ್ದಿವೆ. ಪಟ್ಟಿಯಲ್ಲಿ 8ನೇ ಸ್ಥಾನ

13 ದೇಶಗಳು: ಈ ಸಲ 10ಕ್ಕಿಂತ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ದೇಶಗಳ ಸಂಖ್ಯೆ 13.

06 ಬಾರಿ ನಂ.1: ಚೀನಾ ಸತತ 6 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಪದಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ.