ನ್ಯೂಜಿಲೆಂಡ್‌ ವಿರುದ್ಧ 3ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಹಿನ್ನಡೆ - ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 86 ರನ್‌

| Published : Nov 02 2024, 01:19 AM IST / Updated: Nov 02 2024, 04:30 AM IST

ನ್ಯೂಜಿಲೆಂಡ್‌ ವಿರುದ್ಧ 3ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಹಿನ್ನಡೆ - ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 86 ರನ್‌
Share this Article
  • FB
  • TW
  • Linkdin
  • Email

ಸಾರಾಂಶ

ನ್ಯೂಜಿಲೆಂಡ್‌ ವಿರುದ್ಧ 3ನೇ ಟೆಸ್ಟ್‌ನಲ್ಲಿ ಸಮಯಪ್ರಜ್ಞೆ ಇಲ್ಲದೆ ಬ್ಯಾಟ್‌ ಮಾಡಿ ಬೌಲಿಂಗ್‌ನಲ್ಲಿ ಸಾಧಿಸಿದ್ದ ಮೇಲುಗೈ ಬಿಟ್ಟುಕೊಟ್ಟ ಭಾರತ. ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸಲ್ಲಿ 235ಕ್ಕೆ ಆಲೌಟ್‌.  

ಮುಂಬೈ: ರವೀಂದ್ರ ಜಡೇಜಾ ಮುಂಬೈನ ಸುಡು ಬಿಸಿಲು, ಧಗೆಯಲ್ಲಿ ಸತತ 22 ಓವರ್‌ ಬೌಲ್‌ ಮಾಡಿ, 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸಲ್ಲಿ ನ್ಯೂಜಿಲೆಂಡನ್ನು 235 ರನ್‌ಗೆ ಕಟ್ಟಿಹಾಕಿದರು. ಆದರೆ, ಸಮಯಪ್ರಜ್ಞೆ ಇಲ್ಲದೆ ಬ್ಯಾಟ್‌ ಮಾಡಿದ ಭಾರತ, ದಿನದಾಟದ ಕೊನೆಯ 2 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ತಾನು ಸಾಧಿಸಿದ್ದ ಮೇಲುಗೈಯನ್ನು ಬಿಟ್ಟುಕೊಟ್ಟಿತು.  ಮೊದಲ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿದ್ದು, ಇನ್ನೂ 149 ರನ್‌ ಹಿನ್ನಡೆಯಲ್ಲಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ 14ನೇ 5 ವಿಕೆಟ್‌ ಗೊಂಚಲಿಗೆ ಜಡೇಜಾ ಭಾರಿ ಪರಿಶ್ರಮ ವಹಿಸಬೇಕಾಯಿತು. ಅದರಲ್ಲೂ 2ನೇ ಅವಧಿಯಲ್ಲಿ 37 ಡಿಗ್ರಿ ಬಿಸಿಲಿದ್ದಾಗ, ಆಟಗಾರರು ಪ್ರತಿ 3 ಓವರ್‌ಗೊಮ್ಮೆ ಡ್ರಿಂಕ್ಸ್‌ ಬ್ರೇಕ್‌ ತೆಗೆದುಕೊಳ್ಳುತ್ತಿದ್ದರು. ಹೀಗಿದ್ದರೂ, ಕಿವೀಸನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಜಡೇಜಾ ದೊಡ್ಡ ಪಾತ್ರ ವಹಿಸಿದರು. ಹಿರಿಯ ಸ್ಪಿನ್ನರ್‌ಗೆ ಉತ್ತಮ ಬೆಂಬಲ ನೀಡಿದ ವಾಷಿಂಗ್ಟನ್‌ ಸುಂದರ್‌ ತಮ್ಮ ಉತ್ತಮ ಲಯ ಮುಂದುವರಿಸಿ, 4 ವಿಕೆಟ್‌ ಕಿತ್ತರು. ಯಂಗ್‌-ಮಿಚೆಲ್‌ ಆಸರೆ: ಟಾಸ್‌ ಗೆದ್ದು ಎರಡನೇ ಆಲೋಚನೆಯೇ ಇಲ್ಲದೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕಿವೀಸ್‌ಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. 72 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲೆಂಡ್‌ಗೆ ಆಸರೆಯಾಗಿದ್ದು ವಿಲ್‌ ಯಂಗ್‌ ಹಾಗೂ ಡ್ಯಾರಿಲ್ ಮಿಚೆಲ್‌. ಇವರಿಬ್ಬರು 4ನೇ ವಿಕೆಟ್‌ಗೆ 87 ರನ್‌ ಸೇರಿಸಿದರು. ಇವರಿಬ್ಬರ ಜೊತೆಯಾಟ ಅಪಾಯಕಾರಿಯಾಗಿ ತೋರುತ್ತಿದ್ದಾಗ, ಯಂಗ್‌ (71)ರನ್ನು ಜಡೇಜಾ ಪೆವಿಲಿಯನ್‌ಗಟ್ಟಿದರು. ಇಲ್ಲಿಂದಾಚೆಗೆ ಕಿವೀಸ್‌ ಚೇತರಿಸಿಕೊಳ್ಳಲಿಲ್ಲ.

159 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌, ದಿಢೀರ್‌ ಕುಸಿತ ಕಂಡು 235 ರನ್‌ಗೆ ಆಲೌಟ್‌ ಆಯಿತು. ಮಿಚೆಲ್‌ 82 ರನ್‌ ಗಳಿಸಿ ವಾಷಿಂಗ್ಟನ್‌ಗೆ ವಿಕೆಟ್‌ ಒಪ್ಪಿಸಿದರು. ಭಾರತ ‘ಗಡಿಬಿಡಿ’: ಸರಣಿ ಸೋತ ಬಳಿಕ ಭಾರತದ ಆತ್ಮವಿಶ್ವಾಸ ಕುಗ್ಗಿದೆ ಎನ್ನುವುದಕ್ಕೆ ಭಾರತೀಯರು ಬ್ಯಾಟಿಂಗ್‌ ವೇಳೆ ತೋರಿದ ಗಡಿಬಿಡಿಯೇ ಸಾಕ್ಷಿ. ಆರಂಭದಲ್ಲೇ ಜೀವದಾನ ಪಡೆದರೂ, ರೋಹಿತ್‌ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ 18 ರನ್‌ಗೆ ಔಟಾದರು. ಆ ಬಳಿಕ, 2ನೇ ವಿಕೆಟ್‌ಗೆ ಜೊತೆಯಾಟ ಯಶಸ್ವಿ ಜೈಸ್ವಾಲ್‌ ಹಾಗೂ ಶುಭ್‌ಮನ್‌ ಗಿಲ್‌ ತಂಡಕ್ಕೆ ಉತ್ತಮ ಚೇತರಿಕೆ ಒದಗಿಸಿದರು. ಇವರಿಬ್ಬರು ಔಟಾಗದೆ ದಿನದಾಟ ಮುಗಿಸಲಿದ್ದಾರೆ, ಭಾರತ ಮೇಲುಗೈ ಸಾಧಿಸಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ದಿನದಾಟ ಮುಗಿಯಲು ಕೇವಲ 2 ಓವರ್‌ ಬಾಕಿ ಇದ್ದಾಗ ಜೈಸ್ವಾಲ್‌(30) ರಿವರ್ಸ್‌ ಸ್ವೀಪ್‌ಗೆ ಯತ್ನಿಸಿ ಕೈಸುಟ್ಟುಕೊಂಡರು. ತಮ್ಮ ಟೆಸ್ಟ್‌ ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಜೈಸ್ವಾಲ್‌ ರಿವರ್ಸ್‌ ಸ್ವೀಪ್‌ಗೆ ಔಟಾಗಿದ್ದರು. ಈ ಮೊದಲು 14 ಯತ್ನಗಳಲ್ಲಿ 36 ರನ್‌ ಕಲೆಹಾಕಿದ್ದರು.

ರಾತ್ರಿ ಕಾವಲುಗಾರನಾಗಿ ಮೊಹಮದ್‌ ಸಿರಾಜ್‌ರನ್ನು ಕಣಕ್ಕಿಳಿಸುವ ಭಾರತ ತಂಡದ ಆಡಳಿತದ ನಿರ್ಧಾರ ಕೈಹಿಡಿಯಲಿಲ್ಲ. ತಾವು ಎದುರಿಸಿದ ಮೊದಲ ಯತ್ನದಲ್ಲೇ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದಲ್ಲದೇ, ರಿವ್ಯೂ ಸಹ ವ್ಯರ್ಥ ಮಾಡಿದರು. 2 ಎಸೆತದಲ್ಲಿ 2 ವಿಕೆಟ್‌ ಕಿತ್ತ ಅಜಾಜ್‌ ಪಟೇಲ್‌ ಕಿವೀಸ್‌ ಪಾಳಯದಲ್ಲಿ ಸಂತಸ ಮೂಡಿಸಿದರು.

ನ್ಯೂಜಿಲೆಂಡ್‌ನ ಸಂತಸ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ವಿರಾಟ್‌ ಕೊಹ್ಲಿಯ ವಿಕೆಟ್‌. ದಿನದಾಟದ ಕೊನೆಯ ಓವರಲ್ಲಿ ಇಲ್ಲದ ರನ್‌ ಕಸಿಯಲು ಹೋಗಿ ಕೊಹ್ಲಿ (04) ರನೌಟ್‌ ಬಲೆಗೆ ಬಿದ್ದರು. ಮ್ಯಾಟ್‌ ಹೆನ್ರಿ ಗುರಿಯಿಟ್ಟು ನೇರವಾಗಿ ಸ್ಟಂಪ್ಸ್‌ ಬೀಳಿಸಿದಾಗ ಕೊಹ್ಲಿ ಕ್ರೀಸ್‌ನಿಂದ ಬಹಳ ಹಿಂದಿದ್ದರು. 2 ಓವರಲ್ಲಿ ಕೇವಲ 6 ರನ್‌ಗೆ ಭಾರತ 3 ವಿಕೆಟ್‌ ಕಳೆದುಕೊಂಡು, ದಿನದಾಟವನ್ನು 4 ವಿಕೆಟ್‌ಗೆ 86 ರನ್‌ಗಳಿಗೆ ಮುಗಿಸಿತು.

ಮೊದಲ ದಿನವೇ ಸ್ಪಿನ್ನರ್‌ಗಳಿಗೆ 11 ವಿಕೆಟ್‌ ಉದುರಿದ್ದು, ಭಾರತ ತಂಡ ಈ ಪಿಚ್‌ನಲ್ಲಿ ಕೊನೆಯದಾಗಿ ಬ್ಯಾಟ್‌ ಮಾಡಬೇಕಿದೆ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸುವ ರನ್‌ಗಳು ನಿರ್ಣಾಯಕವಾಗಲಿದ್ದು, 31 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿರುವ ಶುಭ್‌ಮನ್‌ ಗಿಲ್‌, 1 ರನ್‌ ಗಳಿಸಿ ಔಟಾಗದೆ ಉಳಿದಿರುವ ರಿಷಭ್‌ ಪಂತ್‌ ಮೇಲೆ ಭಾರಿ ದೊಡ್ಡ ಜವಾಬ್ದಾರಿ ಇದೆ. ಸ್ಕೋರ್‌: ನ್ಯೂಜಿಲೆಂಡ್‌ 235/10 (ಮಿಚೆಲ್‌ 82, ಯಂಗ್‌ 71, ಜಡೇಜಾ 5-65, ವಾಷಿಂಗ್ಟನ್‌ 4-81), ಭಾರತ (ಮೊದಲ ದಿನದಂತ್ಯಕ್ಕೆ) 86/4 (ಗಿಲ್‌ 31*, ಜೈಸ್ವಾಲ್‌ 30, ಅಜಾಜ್‌ 2-33)

ತವರಿನಲ್ಲಿ ಕೇವಲ ಒಮ್ಮೆ

ವೈಟ್‌ವಾಶ್‌ ಆಗಿದೆ ಭಾರತ!

ತವರಿನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್‌ ಸರಣಿ ನಡೆದಾಗ ಭಾರತ ತಂಡ ಈ ವರೆಗೂ ಕೇವಲ ಒಮ್ಮೆ ಮಾತ್ರ ವೈಟ್‌ವಾಶ್‌ (ಸರಣಿಯ ಎಲ್ಲ ಪಂದ್ಯಗಳಲ್ಲಿ ಸೋಲು). 1999-2000ರಲ್ಲಿ ಭಾರತ ವಿರುದ್ಧ ಭಾರತದಲ್ಲಿ ನಡೆದಿದ್ದ 2 ಪಂದ್ಯಗಳ ಸರಣಿಯನ್ನು ದಕ್ಷಿಣ ಆಫ್ರಿಕಾ 2-0ಯಲ್ಲಿ ಗೆದ್ದಿತ್ತು. ಇದೀಗ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದು ಭಾರತದಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆದ್ದ ಸಾಧನೆ ಮಾಡಿರುವ ನ್ಯೂಜಿಲೆಂಡ್‌, 3ನೇ ಟೆಸ್ಟ್‌ ಮೇಲೂ ಹಿಡಿತ ಸಾಧಿಸಿದಂತೆ ಕಂಡು ಬರುತ್ತಿದೆ. ಕಿವೀಸ್‌ ಅಪರೂಪದ ಸಾಧನೆ ಮಾಡಲು ಕಾತರಿಸುತ್ತಿದೆ.