ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಅಫ್ಘಾನಿಸ್ತಾನ ಫೈಟ್‌

| Published : Mar 26 2024, 01:00 AM IST

ಸಾರಾಂಶ

ಡ್ರಾಗೊಂಡಿದ್ದ ಇತ್ತಂಡಗಳ ನಡುವಿನ ಮೊದಲ ಪಂದ್ಯ. ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆ ಯಲ್ಲಿರುವ ಭಾರತಕ್ಕೆ ಗೆಲುವು ಅನಿವಾರ್ಯ

ಅಭಾ(ಸೌದಿ ಅರೇಬಿಯಾ): 2026ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆ ಯಲ್ಲಿರುವ ಭಾರತ ತಂಡ 2ನೇ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಮಂಗಳವಾರ ಅಫ್ಘಾನಿಸ್ತಾನ ವಿರುದ್ಧ ಸೆಣಸಾಡಲಿದೆ. ಇತ್ತೀಚೆಗಷ್ಟೇ ನಡೆದಿದ್ದ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ ಗೋಲು ರಹಿತ ಡ್ರಾಗೊಂಡಿತ್ತು.

ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತ 117ನೇ ಸ್ಥಾನದಲ್ಲಿದ್ದರೆ, ಆಫ್ಘನ್‌ 158ರಲ್ಲಿದೆ. ಭಾರತ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ ತಲಾ 1 ಜಯ, ಸೋಲು, ಡ್ರಾದೊಂದಿಗೆ 4 ಅಂಕ ಸಂಪಾದಿಸಿದ್ದು, 2ನೇ ಸ್ಥಾನದಲ್ಲಿದೆ. ಕತಾರ್‌(9 ಅಂಕ) ಅಗ್ರಸ್ಥಾನದಲ್ಲಿದ್ದು, ಕುವೈತ್‌(3 ಅಂಕ) ಹಾಗೂ ಅಫ್ಘಾನಿಸ್ತಾನ(1 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿವೆ.

ಚೆಟ್ರಿಗೆ 150ನೇ ಪಂದ್ಯ

ದಿಗ್ಗಜ ಫುಟ್ಬಾಲಿಗ ಸುನಿಲ್‌ ಚೆಟ್ರಿ 150ನೇ ಪಂದ್ಯವಾಡಲಿದ್ದಾರೆ. 2005ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಚೆಟ್ರಿ ಈ ವರೆಗೆ 149 ಪಂದ್ಯಗಳಲ್ಲಿ 93 ಗೋಲು ಬಾರಿಸಿದ್ದು, 11 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.