ಭಾರತ-ಬಾಂಗ್ಲಾ ಟೆಸ್ಟ್‌ ಸಮರಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಚಾಲನೆ -ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿ

| Published : Sep 19 2024, 01:51 AM IST / Updated: Sep 19 2024, 04:39 AM IST

ಭಾರತ-ಬಾಂಗ್ಲಾ ಟೆಸ್ಟ್‌ ಸಮರಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಚಾಲನೆ -ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಸಜ್ಜಾಗಿದೆ. ಮೊದಲ ಪಂದ್ಯವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯು ಭಾರತಕ್ಕೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮುಖ್ಯವಾಗಿದೆ.

ಚೆನ್ನೈ: ಭಾರತ ಕ್ರಿಕೆಟ್‌ ತಂಡ ಮೈಗೊಡವಿ ಮತ್ತೆ ಅಖಾಡಕ್ಕಿಳಿಯುವ ಸಮಯ ಬಂದಿದೆ. ಸುದೀರ್ಘ ಟೆಸ್ಟ್‌ ಋತು ಮುಂದಿದ್ದು, ಕಳೆದ 6 ತಿಂಗಳಿಂದ ಒಂದೂ ಟೆಸ್ಟ್‌ ಆಡದ ಟೀಂ ಇಂಡಿಯಾ ಮುಂದಿನ ಮೂರುವರೆ ತಿಂಗಳಲ್ಲಿ 10 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಸರಣಿಯೊಂದಿಗೆ ಭಾರತಕ್ಕೆ ಸವಾಲು ಆರಂಭಗೊಳ್ಳಲಿದ್ದು, ಆ ಸರಣಿಯ ಮೊದಲ ಪಂದ್ಯ ಗುರುವಾರದಿಂದ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಶುರುವಾಗಲಿದೆ. 

ಯಾವುದೇ ತಂಡಕ್ಕಾದರೂ ಭಾರತದಲ್ಲಿ ಟೆಸ್ಟ್‌ ಗೆಲ್ಲುವುದು ಭಾರಿ ಕಷ್ಟದ ಕೆಲಸ ಎನ್ನುವುದರಲ್ಲಿ ಅನುಮಾನವಿಲ್ಲ. ಈ ವಿಚಾರವನ್ನು ಒಪ್ಪಿಕೊಂಡಿರುವ ಬಾಂಗ್ಲಾ, ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೋರಾಟ ಪ್ರದರ್ಶಿಸುವುದಾಗಿ ಹೇಳಿಕೊಂಡಿದೆ.ಭಾರತ ಫೇವರಿಟ್‌: 6 ತಿಂಗಳ ಬಳಿಕ ಟೆಸ್ಟ್‌ ಆಡುತ್ತಿದ್ದರೂ, ಭಾರತವೇ ಗೆಲ್ಲುವ ಫೇವರಿಟ್ಸ್‌ ಎನಿಸಿಕೊಂಡು ಸರಣಿಗೆ ಕಾಲಿಡಲಿದೆ. ಅತ್ಯಂತ ಬಲಿಷ್ಠ ಬ್ಯಾಟಿಂಗ್‌, ಬೌಲಿಂಗ್‌ ಪಡೆಯನ್ನು ಹೊಂದಿರುವ ಭಾರತ, ನಿರಾಯಾಸವಾಗಿ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ಸಾಮಾನ್ಯವಾಗಿ ತವರಿನಲ್ಲಿ ಆಡುವಾಗ ಭಾರತ ತಂಡ ಮೂವರು ಸ್ಪಿನ್ನರ್ಸ್‌ ಹಾಗೂ ಇಬ್ಬರು ವೇಗಿಗಳೊಂದಿಗೆ ಆಡಲಿದೆ. ಈ ಪಂದ್ಯದಲ್ಲೂ ಅದೇ ಸಂಯೋಜನೆಗೆ ಮಣೆ ಹಾಕಬಹುದು. ಒಂದು ವೇಳೆ 3ನೇ ವೇಗಿಯನ್ನು ಆಡಿಸಲು ನಿರ್ಧರಿಸಿದರೆ, ಆಗ ಆಕಾಶ್‌ದೀಪ್‌ಗೆ ಸ್ಥಾನ ಸಿಗಬಹುದು.

ಬಾಂಗ್ಲಾದೇಶ ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಬಾಂಗ್ಲಾ ಸಹ ಮೂವರು ಗುಣಮಟ್ಟದ ಸ್ಪಿನ್ನರ್‌ಗಳೊಂದಿಗೆ ಭಾರತಕ್ಕೆ ಆಗಮಿಸಿದ್ದು, ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡಲು ಎದುರು ನೋಡುತ್ತಿದೆ. ಒಟ್ಟು ಮುಖಾಮುಖಿ: 13

ಭಾರತ: 11

ಬಾಂಗ್ಲಾದೇಶ: 00

ಡ್ರಾ: 02 ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಸಿರಾಜ್‌, ಜಸ್‌ಪ್ರೀತ್‌ ಬೂಮ್ರಾ.

ಬಾಂಗ್ಲಾದೇಶ: ಶದ್ಮನ್‌ ಇಸ್ಲಾಂ, ಝಾಕಿರ್‌ ಹಸನ್‌, ನಜ್ಮುಲ್‌ ಶಾಂತೋ (ನಾಯಕ), ಮೊಮಿನುಲ್‌ ಇಸ್ಲಾಂ, ಮುಷ್ಫಿಕುರ್‌ ರಹೀಂ, ಲಿಟನ್‌ ದಾಸ್‌, ಶಕೀಬ್‌ ಅಲ್‌ ಹಸನ್‌, ಮೆಹಿದಿ ಹಸನ್‌, ಟಸ್ಕಿನ್‌ ಅಹ್ಮದ್‌, ಹಸನ್‌ ಮಹ್ಮುದ್‌, ನಹಿದ್‌/ತೈಜುಲ್‌.ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾಪಿಚ್‌ ರಿಪೋರ್ಟ್‌

ಮೊದಲ ಟೆಸ್ಟ್‌ಗೆ ಚೆಪಾಕ್‌ನ ಕೆಂಪು ಮಣ್ಣಿನ ಪಿಚ್‌ ಅನ್ನು ಆಯ್ಕೆ ಮಾಡಲಾಗಿದ್ದು, ವೇಗಿಗಳು ಹಾಗೂ ಸ್ಪಿನ್ನರ್ಸ್‌ ಇಬ್ಬರಿಗೂ ನೆರವು ದೊರೆಯಲಿದೆ. ಆದರೆ ಚೆನ್ನೈನ ಉರಿ ಬಿಸಿಲಿಗೆ ಪಿಚ್‌ ಬಹಳ ಬೇಗ ಬಿರುಕು ಬಿಡಲು ಆರಂಭಿಸಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್ಸ್‌ಗಳ ಪಾತ್ರ ನಿರ್ಣಾಯಕವಾಗಲಿದೆ. --2012ರಿಂದ ತವರಿನಲ್ಲಿ

ಸರಣಿ ಸೋತಿಲ್ಲ ಭಾರತ!

ಭಾರತ ತಂಡ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ಕಳೆದ 10 ವರ್ಷಗಳಲ್ಲಿ ಕೇವಲ 4 ಟೆಸ್ಟ್‌ಗಳನ್ನು ಸೋತಿದೆ. ಇನ್ನು ಸರಣಿ ಸೋತು 12 ವರ್ಷಗಳೇ ಆಗಿವೆ. 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ ಬಳಿಕ ಭಾರತ ಸತತ 17 ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ. --

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌

ಫೈನಲ್‌ನತ್ತ ಭಾರತ ಚಿತ್ತ

ಮೊದಲೆರಡು ಆವೃತ್ತಿಗಳ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಳಲ್ಲಿ ಆಡಿದ್ದ ಭಾರತ, ಸದ್ಯ 2023-25ರ ಅವಧಿಯ ವಿಶ್ವ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಶೇ.68.52 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡ ಸದ್ಯ ಇರುವ ಲಯವನ್ನು ಗಮನಿಸಿದಾಗ ಸತತ 3ನೇ ಬಾರಿಗೆ ಫೈನಲ್‌ಗೇರಿದರೆ ಅಚ್ಚರಿಯಿಲ್ಲ. ತವರಿನಲ್ಲಿ ಬಾಂಗ್ಲಾ ವಿರುದ್ಧ 2, ನ್ಯೂಜಿಲೆಂಡ್‌ ವಿರುದ್ಧ 3 ಟೆಸ್ಟ್‌ಗಳನ್ನು ಆಡಲಿರುವ ಭಾರತ, ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್‌ಗಳನ್ನು ಆಡಲಿದೆ. ಒಟ್ಟಾರೆ 10 ಪಂದ್ಯಗಳಲ್ಲಿ ಕನಿಷ್ಠ 6-7 ಪಂದ್ಯಗಳಲ್ಲಿ ಗೆದ್ದರೆ ಭಾರತ ಫೈನಲ್‌ ಪ್ರವೇಶಿಸಲಿದೆ.

--03 ಸೋಲು

ಬಾಂಗ್ಲಾದೇಶ ಈ ವರೆಗೂ ಭಾರತದಲ್ಲಿ 3 ಟೆಸ್ಟ್‌ಗಳನ್ನು ಆಡಿದ್ದು, ಮೂರರಲ್ಲೂ ಹೀನಾಯ ಸೋಲು ಕಂಡಿದೆ.