ಮತ್ತೆ ಭಾರತಕ್ಕೆ ವಿಶ್ವ ಕಿರೀಟ ಮಿಸ್‌!

| Published : Feb 12 2024, 01:32 AM IST / Updated: Feb 12 2024, 09:00 AM IST

Under 19 World Cup 2024

ಸಾರಾಂಶ

ಅಂಡರ್‌-19 ವಿಶ್ವಕಪ್‌ನಲ್ಲಿ 6ನೇ ಟ್ರೋಫಿ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 79 ರನ್‌ ಆಘಾತಕಾರಿ ಸೋಲು ಅನುಭವಿಸಿದ ಭಾರತ, ಟೂರ್ನಿಯುದ್ದಕ್ಕೂ ಅಬ್ಬರಿಸಿ ಫೈನಲ್‌ನಲ್ಲಿ ಆಸೀಸ್‌ಗೆ ಶರಣಾಯಿತು.

ಬೆನೋನಿ(ದಕ್ಷಿಣ ಆಫ್ರಿಕಾ): ಕಳೆದ ವರ್ಷ ನವೆಂಬರ್‌ನಲ್ಲಿ ಭಾರತಕ್ಕೆ ಎದುರಾದ ವಿಶ್ವಕಪ್‌ ಫೈನಲ್‌ನ ಆಘಾತಕಾರಿ ಸೋಲನ್ನು ಇನ್ನೂ ಕೋಟ್ಯಂತರ ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. 

ಈ ನಡುವೆ ದೇಶದ ಕ್ರಿಕೆಟ್‌ ಅಭಿಮಾನಿಗಳಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಅಂಡರ್‌-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 79 ರನ್‌ ಸೋಲನುಭವಿಸಿದೆ. 

ಹಿರಿಯರ ಬಳಿಕ ಕಿರಿಯರಿಗೂ ಕಾಂಗರೂಗಳು ಅಘಾತ ನೀಡಿದ್ದು, 4ನೇ ಬಾರಿ ವಿಶ್ವಕಪ್‌ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. 9ನೇ ಬಾರಿ ಫೈನಲ್‌ಗೇರಿದ್ದ ಭಾರತ 6ನೇ ಟ್ರೋಫಿ ಕನಸು ಭಗ್ನಗೊಂಡಿತು.

ಬೆನೋನಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿತ್ತು. ಟೂರ್ನಿಯುದ್ದಕ್ಕೂ ಭಾರತೀಯರ ಪ್ರದರ್ಶನ ನೋಡಿದ್ದವರಿಗೆ ಪ್ರಶಸ್ತಿ ಗೆಲ್ಲುವುದು ಭಾರತವೇ ಎಂಬ ಆತ್ಮವಿಶ್ವಾಸವಿತ್ತು. 

ಆದರೆ ಪ್ರಶಸ್ತಿ ಸುತ್ತಿನಲ್ಲಿ ಒತ್ತಡ ನಿಭಾಯಿಸಲಾಗದೆ ಸೋಲುವ ಪರಿಪಾಠ ಭಾರತ ಮುಂದುವರಿಸಿತು.ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ಗಳಿಸಿದ್ದು 7 ವಿಕೆಟ್‌ಗೆ 253 ರನ್‌. 

ಫೈನಲ್‌ನಲ್ಲಿ ಇದು ದೊಡ್ಡ ಮೊತ್ತವೇ ಆಗಿದ್ದರೂ ಭಾರತದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದ್ದರಿಂದ ಈ ಮೊತ್ತ ಅಸಾಧ್ಯವೇನೂ ಆಗಿರಲಿಲ್ಲ. 

ಆದರೆ ಆಸೀಸ್‌ನ ವೇಗದ ಬೌಲಿಂಗ್‌ ದಾಳಿಗೆ ನಲುಗಿದ ಭಾರತ ಪ್ರತಿ ರನ್ ಗಳಿಸಲು ತಿಣುಕಾಡಬೇಕಾಯಿತು. ಒಂದಿಬ್ಬರ ಹೋರಾಟದ ಹೊರತಾಗಿಯೂ ತಂಡ 43.5 ಓವರ್‌ಗಳಲ್ಲಿ 174 ರನ್‌ಗೆ ಸರ್ವಪತನ ಕಂಡಿತು.

3ನೇ ಓವರಲ್ಲೇ ಅರ್ಶಿನ್‌ ಕುಲ್ಕರ್ಣಿ ವಿಕೆಟ್‌ ಕಳೆದುಕೊಂಡಾದ ತಂಡದ ಮೊತ್ತ ಇನ್ನೂ 3 ರನ್‌. ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿದ್ದ ಮುಶೀರ್‌ ಖಾನ್‌ 22, ನಾಯಕ ಉದಯ್‌ ಸಹರನ್‌ 8 ರನ್‌ಗೆ ವಿಕೆಟ್‌ ಒಪ್ಪಿಸಿದಾಗಲೇ ಭಾರತೀಯರಲ್ಲಿ ಸೋಲಿನ ಕರಿಛಾಯೆ ಆವರಿಸಿತ್ತು. 

ಸಚಿನ್‌ ಧಾಸ್‌ 9 ರನ್‌ಗೆ ಔಟಾಗದ ತಂಡದ ಮೊತ್ತ ಇನ್ನೂ 64. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿ ನಿಧಾನವಾಗಿಯೇ ರನ್‌ ಕಲೆಹಾಕುತ್ತಿದ್ದ ಆದರ್ಶ್ ಸಿಂಗ್‌ 47 ರನ್‌ ಗಳಿಸಿದರು. 

ಆದರೆ ಇತರರಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಉಳಿದಂತೆ ಮುರುಗನ್‌ ಅಭಿಷೇಕ್‌ ಹೊರತುಪಡಿಸಿ ಬೇರೆ ಯಾರಿಗೂ ಆಸೀಸ್‌ ಬೌಲರ್‌ಗಳನ್ನು ಎದುರಿಸಿ ನಿಲ್ಲಲಾಗಲಿಲ್ಲ. 

ಕೊನೆವರೆಗೂ ಹೋರಾಡಿದ ಅಭಿಷೇಕ್‌ 46 ಎಸೆತಗಳಲ್ಲಿ 42 ರನ್‌ ಗಳಿಸಿ ಪೆವಿಲಿಯನ್‌ ಮರಳಿದರು. ಯಾವುದೇ ವಿಕೆಟ್‌ಗೂ ಉತ್ತಮ ಜೊತೆಯಾಟ ಮೂಡಿಬರದ ಕಾರಣ ಭಾರತ ತಂಡ ಆಸೀಸ್‌ ಮುಂದೆ ಮಂಡಿಯೂರಲೇಬಾಕಾಯಿತು. 

ರಾಫ್‌ ಮ್ಯಾಕ್‌ಮಿಲನ್‌ ಹಾಗೂ ಬಿಯರ್ಡ್‌ಮ್ಯಾನ್‌ ತಲಾ 3 ವಿಕೆಟ್‌ ಕಬಳಿಸಿದರು.

ಸಂಘಟಿತ ಹೋರಾಟ: ಫೈನಲ್‌ನಲ್ಲಿ 250 ಆದರೂ ದೊಡ್ಡ ಮೊತ್ತವೇ ಅಂದುಕೊಂಡಿದ್ದ ಆಸೀಸ್‌ ಎಚ್ಚರಿಕೆಯಿಂದಲೂ ರನ್‌ ಕಲೆಹಾಕಲು ಶುರುವಿಟ್ಟಿತು. 

ಆರಂಭಿಕ ಆಟಗಾರ ಸ್ಯಾಮ್‌ ಕಾನ್ಸ್‌ಟಸ್‌ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಹ್ಯಾರಿ ಡಿಕ್ಸನ್‌ ಹಾಗೂ ನಾಯಕ ಹ್ಯೂಸ್‌ ವೀಬ್‌ಗೆನ್‌ ತಂಡವನ್ನು ಮೇಲೆತ್ತಿದರು. ಡಿಕ್ಸನ್‌ 42ಕ್ಕೆ ನಿರ್ಗಮಿಸಿದರೆ, ವೀಬ್‌ಗೆನ್‌ ಇನ್ನಿಂಗ್ಸ್‌ 48 ರನ್‌ಗೆ ಕೊನೆಗೊಂಡಿತು. 

ಹರ್ಜಾಸ್‌ ಸಿಂಗ್‌ 64 ಎಸೆತಗಳಲ್ಲಿ 55 ರನ್‌ ಸಿಡಿಸಿದ್ದು ತಂಡಕ್ಕೆ ಆಸರೆಯಾಯಿತು. ಆ ಬಳಿಕ ಓಲಿವರ್‌ ಪೀಕ್‌ ಡೆತ್‌ ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳನ್ನು ಚೆಂಡಾಡಿ, 43 ಎಸೆತಗಳಲ್ಲಿ 46 ರನ್‌ ಸಿಡಿಸಿದರು.

ವೇಗದ ಬೌಲರ್‌ ರಾಜ್‌ ಲಿಂಬಾನಿ 38 ರನ್‌ಗೆ 3 ವಿಕೆಟ್‌ ಕಬಳಿಸಿದರೆ, ನಮನ್‌ ತಿವಾರಿ 2 ವಿಕೆಟ್‌ ಕಿತ್ತರು. ಮುಶೀರ್‌ ಖಾನ್‌, ಸೌಮಿ ಪಾಂಡೆ ತಲಾ 1 ವಿಕೆಟ್‌ ಪಡೆದರು.

ಸ್ಕೋರ್‌: ಆಸ್ಟ್ರೇಲಿಯಾ 50 ಓವರಲ್ಲಿ 253/7(ಹರ್ಜಾಸ್‌ 55, ವೀಬ್‌ಗೆನ್‌ 48, ಓಲಿವರ್‌ 46*, ಡಿಕ್ಸನ್‌ 42, ರಾಜ್‌ 3-38, ನಮನ್‌ 2-63), ಭಾರತ 43.5 ಓವರ್‌ಗಳಲ್ಲಿ 174/10 (ಆದರ್ಶ್‌ 47, ಮುರುಗನ್‌ 42, ಮುಶೀರ್‌ 22, ಬಿಯರ್ಡ್‌ಮ್ಯಾನ್‌ 3-15, ಮ್ಯಾಕ್‌ಮಿಲನ್‌ 3-43)

ಟರ್ನಿಂಗ್ ಪಾಯಿಂಟ್‌: ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭದ ಅಗತ್ಯವಿತ್ತು. ಆದರ್‌ ಪವರ್‌ಪ್ಲೇನಲ್ಲೂ ರನ್‌ ಗಳಿಸಲಾಗದೆ ಒತ್ತಡಕ್ಕೊಳಗಾದ ಭಾರತ, ವಿಕೆಟ್‌ಗಳನ್ನೂ ಕಳೆದುಕೊಂಡಿತು. 100 ರನ್‌ಗೂ ಮುನ್ನವೇ 6 ವಿಕೆಟ್‌ ಕಳೆದುಕೊಂಡ ತಂಡ ಮತ್ತೆ ಚೇತರಿಸಿಕೊಳ್ಳಲಿಲ್ಲ.

ಆಸ್ಟ್ರೇಲಿಯಾ ವಿರುದ್ಧದಹ್ಯಾಟ್ರಿಕ್‌ ಕನಸು ಭಗ್ನ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಮೊದಲು 2 ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 

2 ಬಾರಿಯೂ ಪ್ರಶಸ್ತಿ ಗೆದ್ದಿದ್ದ ಟೀಂ ಇಂಡಿಯಾ ಈ ಬಾರಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿತ್ತು. ಆದರೆ 2012, 2018ರ ಫೈನಲ್‌ನಲ್ಲಿ ಭಾರತಕ್ಕೆ ಶರಣಾಗಿದ್ದ ಆಸೀಸ್‌ ಈ ಬಾರಿ ಸೇಡು ತೀರಿಸಿಕೊಂಡಿತು.

4ನೇ ಬಾರಿ ಟ್ರೋಫಿ ಮಿಸ್‌: ಭಾರತಕ್ಕೆ ಅಂಡರ್‌-19 ವಿಶ್ವಕಪ್‌ನ ಫೈನಲ್‌ನಲ್ಲಿ ಸೋಲು ಎದುರಾಗಿದ್ದು ಇದು 4ನೇ ಬಾರಿ. ಈ ಮೊದಲು 2006ರಲ್ಲಿ ಪಾಕಿಸ್ತಾನ ವಿರುದ್ಧ, 2016ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ, 2020ರಲ್ಲಿ ಬಾಂಗ್ಲಾದೇಶ ವಿರುದ್ಧ ಫೈನಲ್‌ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು.

ಭಾರತದ ಬೆನ್ನು ಬಿಡದೇಕಾಡುತ್ತಿರುವ ಆಸ್ಟ್ರೇಲಿಯಾ: ಐಸಿಸಿ ಟೂರ್ನಿಗಳಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಆಘಾತ ನೀಡುತ್ತಿರುವುದು ಇದೇ ಮೊದಲೇನಲ್ಲ.

ಕಳೆದ ವರ್ಷವೂ 2 ಬಾರಿ ಕೋಟ್ಯಂತರ ಭಾರತೀಯರ ನಿರೀಕ್ಷೆಗಳನ್ನು ಮಣ್ಣುಪಾಲಾಗಿಸಿದ್ದು ಇದೇ ಆಸ್ಟ್ರೇಲಿಯಾ. 

2023ರ ಜೂನ್‌ನಲ್ಲಿ ಹಿರಿಯರ ವಿಭಾಗದ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧ ಗೆದ್ದು ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ, ಬಳಿಕ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ನಲ್ಲೂ ಟೀಂ ಇಂಡಿಯಾಕ್ಕೆ ಆಘಾತಕಾರಿ ಸೋಲುಣಿಸಿ ಕಿರೀಟ ತನ್ನದಾಗಿಸಿಕೊಂಡಿತ್ತು.

14 ವರ್ಷದ ಬಳಿಕ ಆಸೀಸ್‌ ಚಾಂಪಿಯನ್‌: ಆಸ್ಟ್ರೇಲಿಯಾ ಹಿರಿಯರ ವಿಭಾಗದಲ್ಲಿ ಸತತವಾಗಿ ಚಾಂಪಿಯನ್‌ ಆಗುತ್ತಿದ್ದರೂ ಕಿರಿಯರ ವಿಭಾಗದಲ್ಲಿ ಈ ಬಾರಿಯ ಪ್ರಶಸ್ತಿಗಾಗಿ ಹಲವು ವರ್ಷ ಕಾದಿತ್ತು. 

ಆಸ್ಟ್ರೇಲಿಯಾ ಕೊನೆ ಬಾರಿ 2010ರಲ್ಲಿ ಚಾಂಪಿಯನ್‌ ಆಗಿತ್ತು. 1988ರ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾ, 2ನೇ ಪ್ರಶಸ್ತಿ ಗೆದ್ದಿದ್ದು 2002ರಲ್ಲಿ. 

ಆದರೆ 2010ರ ಬಳಿಕ 2 ಬಾರಿ ಫೈನಲ್‌ಗೇರಿದ್ದರೂ ಆಸೀಸ್‌ಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಈ ಬಾರಿ ದಶಕಗಳ ಪ್ರಶಸ್ತಿ ಬರ ನೀಗಿಸಿದೆ.

ಮರುಕಳಿಸಿದ ನ.19ರ ನೆನಪು: ಭಾರತದ ಯಾವುದೇ ಕ್ರೀಡಾಭಿಮಾನಿಯೂ 2023ರ ನ.1ನ್ನು ಮರೆತಿರಲಿಕ್ಕಿಲ್ಲ. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಾಗ ಕೋಟ್ಯಂತರ ಅಭಿಮಾನಿಗಳು ಕುಗ್ಗಿಹೋಗಿದ್ದರು.

ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬಿರಿದರೂ ಫೈನಲ್‌ನಲ್ಲಿ ಎದುರಾದ ಸೋಲು ಭಾರತೀಯರನ್ನು ಇನ್ನಿಲ್ಲದಂತೆ ಕಾಡಿತ್ತು. ಈ ಬಾರಿಯೂ ಭಾರತಕ್ಕೆ ಅಂಥದ್ದೇ ಪರಿಸ್ಥಿತಿ ಎದುರಾಯಿತು. 

ಕಿರಿಯರ ವಿಭಾಗದಲ್ಲಾದರೂ ಆಸ್ಟ್ರೇಲಿಯಾವನ್ನು ಸೋಲಿಸಿ ಟ್ರೋಫಿ ಗೆಲ್ಲಬಹುದೆಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದರೂ ಫೈನಲ್‌ನಲ್ಲಿ ಒತ್ತಡ ನಿಭಾಯಿಸಲಾಗದೆ ಭಾರತೀಯ ಆಟಗಾರರು ಆಸೀಸ್‌ ಮುಂದೆ ಮಂಡಿಯೂರಿದರು.

2 ವರ್ಷದಲ್ಲಿ 5 ಟ್ರೋಫಿ!
ಐಸಿಸಿ ಟೂರ್ನಿಗಳಲ್ಲಿ ಕಳೆದ 2 ವರ್ಷದಲ್ಲಿ ಇದು ಆಸ್ಟ್ರೇಲಿಯಾ ಗೆದ್ದ 5ನೇ ಪ್ರಶಸ್ತಿ. 2022ರ ಮಾರ್ಚ್‌ನಲ್ಲಿ ಹಿರಿಯ ಮಹಿಳಾ ತಂಡ ಏಕದಿನ ವಿಶ್ವಕಪ್‌ನಲ್ಲಿ ಗೆದ್ದಿದ್ದರೆ, 2023ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 

ಬಳಿಕ 2023ರ ಜೂನ್‌ನಲ್ಲಿ ಹಿರಿಯ ಪುರುಷರ ತಂಡ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜಯಭೇರಿ ಬಾರಿಸಿದ್ದಲ್ಲದೇ, ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ನಲ್ಲೂ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.

02ನೇ ತಂಡ:ಕಿರಿಯರ ವಿಶ್ವಕಪ್‌ನಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಬಾರಿ ಚಾಂಪಿಯನ್‌ ಆದ 2ನೇ ತಂಡ ಆಸ್ಟ್ರೇಲಿಯಾ. ಭಾರತ 5 ಬಾರಿ ಚಾಂಪಿಯನ್‌ ಆಗಿದೆ.