ಸಾರಾಂಶ
ನವದೆಹಲಿ: ಭಾರತದ ಅಗ್ರ ಅಥ್ಲೀಟ್, 2018ರ ಜಕಾರ್ತ ಏಷ್ಯಾಡ್‌ನ 4X400 ಮೀ. ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದ ವಿ.ಕೆ.ವಿಸ್ಮಯ ಡೋಪಿಂಗ್ ಸುಳಿಗೆ ಸಿಲುಕಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ವಿಸ್ಮಯ ನಿಷೇಧಿತ ಕ್ಲೋಮಿಫೀನ್ ಸೇವಿಸಿರುವುದು ಪತ್ತೆಯಾಗಿದೆ.
ಆಗಸ್ಟ್ 24ರಂದು ನಾಡಾ ವಿಸ್ಮಯರ ತವರೂರು ಕಣ್ಣೂರಿನಲ್ಲಿ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿತ್ತು. ಅದರ ವರದಿ ಬಹಿರಂಗಗೊಂಡಿದ್ದು, ವಿಸ್ಮಯ ನಿಷೇಧಿತ ಮದ್ದು ಸೇವಿಸಿರುವುದು ದೃಢಪಟ್ಟಿದೆ. ವಿಸ್ಮಯ ತಾವು ಕ್ಲೋಮಿಫೀನ್ ಸೇವಿಸಿರುವುದನ್ನು ಒಪ್ಪಿಕೊಂಡಿದ್ದು, ಅವರನ್ನು ನಾಡಾ ತಾತ್ಕಾಲಿಕ ಅಮಾನತುಗೊಳಿಸಿದೆ.
ಗರ್ಭಿಣಿಯಾಗಲು ಕ್ಲೋಮಿಫೀನ್
ಸೇವಿಸಿದ್ದೆ: ವಿಸ್ಮಯ ಸ್ಪಷ್ಟನೆ
ನನ್ನ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ ಸಮಯದಲ್ಲಿ ನಾನು ಗರ್ಭಿಣಿಯಾಗಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದೆ. ಈ ವಿಷಯವನ್ನು ನಾಡಾಗೆ ತಿಳಿಸಿದರೂ ಅವರು ಒಪ್ಪುತ್ತಿಲ್ಲ ಎಂದು ವಿಸ್ಮಯ ಸ್ಪಷ್ಟನೆ ನೀಡಿದ್ದಾರೆ. ‘ ನಾನೀಗ 3 ತಿಂಗಳ ಗರ್ಭಿಣಿ. ನಾನು ನನ್ನ ಪ್ರದರ್ಶನ ಗುಣಮಟ್ಟ ಹೆಚ್ಚಿಸಿಕೊಳ್ಳಲು ಔಷಧಿ ತೆಗೆದುಕೊಂಡಿಲ್ಲ. ಎಲ್ಲಾ ವೈದ್ಯಕೀಯ ದಾಖಲೆಗಳನ್ನು ನೀಡಿದ್ದರೂ ನಾಡಾ ಒಪ್ಪುತ್ತಿಲ್ಲ. ಅಗತ್ಯಬಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ’ ಎಂದು ವಿಸ್ಮಯ ಹೇಳಿದ್ದಾರೆ.