ಫಿಫಾ ಅರ್ಹತಾ ಟೂರ್ನಿ: ಅಫ್ಘಾನಿಸ್ತಾನ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಭಾರತ

| Published : Mar 23 2024, 01:18 AM IST

ಸಾರಾಂಶ

ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಹೊರತಾಗಿಯೂ ಗೋಲು ಗಳಿಕೆಯಲ್ಲಿ ಭಾರತಕ್ಕೆ ಯಶಸ್ಸು ಸಿಗಲಿಲ್ಲ. ಆದರೂ ಭಾರತ ಅಂಕಪಟ್ಟಿಯಲ್ಲಿ ಸದ್ಯ 2ನೇ ಸ್ಥಾನದಲ್ಲಿದೆ. ಕತಾರ್‌, ಕುವೈತ್‌, ಅಫ್ಘಾನಿಸ್ತಾನ ವಿರುದ್ಧ ಭಾರತ ಇನ್ನೊಮ್ಮೆ ಮುಖಾಮುಖಿಯಾಗಲಿದೆ.

ಅಭಾ(ಸೌದಿ ಅರೇಬಿಯಾ): ಭಾರತ ಫುಟ್ಬಾಲ್‌ ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ಫಿಫಾ ಫುಟ್ಬಾಲ್‌ ವಿಶ್ವಕಪ್‌ನ 2ನೇ ಸುತ್ತಿನ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 158ನೇ ಸ್ಥಾನದಲ್ಲಿರುವ ಆಫ್ಘನ್‌ ವಿರುದ್ಧ ಗೆಲ್ಲುವ ಮೂಲಕ ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆಯಲ್ಲಿದ್ದ ಭಾರತ, ಗುರುವಾರ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿತು. ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಹೊರತಾಗಿಯೂ ಗೋಲು ಗಳಿಕೆಯಲ್ಲಿ ಭಾರತಕ್ಕೆ ಯಶಸ್ಸು ಸಿಗಲಿಲ್ಲ. ಡ್ರಾದ ಹೊರತಾಗಿಯೂ ವಿಶ್ವ ನಂ.117 ಭಾರತ ‘ಎ’ ಗುಂಪಿನಲ್ಲಿ ಆಡಿದ 3 ಪಂದ್ಯಗಳಲ್ಲಿ ತಲಾ 1 ಜಯ, ಸೋಲು, ಡ್ರಾದೊಂದಿಗೆ 4 ಅಂಕ ಸಂಪಾದಿಸಿದ್ದು, 2ನೇ ಸ್ಥಾನದಲ್ಲಿದೆ. ಕತಾರ್‌(9 ಅಂಕ) ಅಗ್ರಸ್ಥಾನದಲ್ಲಿದ್ದು, ಕುವೈತ್‌(3 ಅಂಕ) ಹಾಗೂ ಅಫ್ಘಾನಿಸ್ತಾನ(1 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿವೆ. ಮಾ.26ಕ್ಕೆ ಭಾರತ ಮತ್ತೆ ಆಫ್ಘನ್‌ ವಿರುದ್ಧ ಆಡಲಿದೆ.

ಥಾಮಸ್ ಕಪ್‌: ಭಾರತಕ್ಕೆ ‘ಸಿ’ ಗುಂಪಿನಲ್ಲಿ ಸ್ಥಾನ

ಚೆಂಗ್ಡು(ಚೀನಾ): ಏ.27ರಿಂದ ಮೇ 5ರ ವರೆಗೆ ಚೀನಾದ ಚೆಂಗ್ಡು ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ಬಿಡಬ್ಲ್ಯುಎಫ್‌ ಥಾಮಸ್ ಕಪ್‌ ಪುರುಷರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಭಾರತ ‘ಸಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಗುಂಪಿನಲ್ಲಿ ಇಂಡೋನೇಷ್ಯಾ, ಥಾಯ್ಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳಿವೆ. ಇದೇ ವೇಳೆ ಉಬರ್‌ ಕಪ್‌ ಮಹಿಳೆಯರ ಟೂರ್ನಿಯಲ್ಲಿ ಭಾರತ ತಂಡ ‘ಎ’ ಗುಂಪಿನಲ್ಲಿವೆ. ಚೀನಾ, ಕೆನಡಾ ಹಾಗೂ ಸಿಂಗಾಪೂರ ಕೂಡಾ ಇದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಎರಡೂ ವಿಭಾಗಗಳಲ್ಲಿ ತಲಾ 16 ತಂಡಗಳು ಸ್ಪರ್ಧಿಸಲಿವೆ.