ಭಾರತದಲ್ಲಿ ಇನ್ನು ಆಯ್ದ ಕ್ರೀಡಾಂಗಣಗಳಲ್ಲಷ್ಟೇ ಟೆಸ್ಟ್‌ ಪಂದ್ಯ? 2019ರಲ್ಲೇ ಸಲಹೆ ನೀಡಿದ್ದ ವಿರಾಟ್‌ ಕೊಹ್ಲಿ

| Published : Sep 30 2024, 01:23 AM IST / Updated: Sep 30 2024, 04:36 AM IST

ಸಾರಾಂಶ

ಟೆಸ್ಟ್‌ ಕ್ರಿಕೆಟ್‌ ಆಯೋಜನೆಗೆ ಕೆಲ ನಿಗದಿತ ಕ್ರೀಡಾಂಗಣಗಳನ್ನಷ್ಟೇ ಬಳಸುವಂತೆ 2019ರಲ್ಲೇ ಸಲಹೆ ನೀಡಿದ್ದ ವಿರಾಟ್‌ ಕೊಹ್ಲಿ. ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮಾದರಿಯಲ್ಲಿ ಟೆಸ್ಟ್‌ ಸೆಂಟರ್‌ಗಳನ್ನು ಗುರುತಿಸಲು ಬಿಸಿಸಿಐ ಈಗಲಾದರೂ ಮನಸು ಮಾಡುತ್ತಾ?.

ನವದೆಹಲಿ: ಇಡೀ ದಿನ ಮಳೆ ಬೀಳದಿದ್ದರೂ ಕಾನ್ಪುರದಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್‌ನ 3ನೇ ದಿನದಾಟ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಭಾರತದಲ್ಲಿ ಇನ್ನು ಉತ್ಕೃಷ್ಟ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಇರುವ ಕ್ರೀಡಾಂಗಣಗಳಲ್ಲಿ ಮಾತ್ರ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸುವಂತೆ ಅನೇಕರು ಬಿಸಿಸಿಐ ಅನ್ನು ಒತ್ತಾಯಿಸಲು ಶುರು ಮಾಡಿದ್ದಾರೆ.

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದಲ್ಲಿ ಕೆಲ ಆಯ್ದ ಕ್ರೀಡಾಂಗಣಗಳಲ್ಲಿ ಮಾತ್ರ ಟೆಸ್ಟ್‌ ಪಂದ್ಯಗಳನ್ನು ನಡೆಸಲಾಗುತ್ತದೆ. ಅದೇ ವ್ಯವಸ್ಥೆಯನ್ನು ಭಾರತದಲ್ಲೂ ಜಾರಿ ಮಾಡಲು ಇದು ಸರಿಯಾದ ಸಮಯ ಎನ್ನುವ ಅಭಿಪ್ರಾಯಗಳು ಅನೇಕರಿಂದ ವ್ಯಕ್ತವಾಗುತ್ತಿದೆ. 

2019ರಲ್ಲೇ ಕೊಹ್ಲಿ ಸಲಹೆ: ಟೆಸ್ಟ್‌ ಪಂದ್ಯಗಳ ವೀಕ್ಷಣೆಗೆ ಕೆಲವೇ ಕೆಲವು ನಗರಗಳಲ್ಲಿ ಮಾತ್ರ ದೊಡ್ಡ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಬೆಂಗಳೂರು, ಮುಂಬೈ, ಚೆನ್ನೈ ನಗರಗಳಲ್ಲಿ ಟೆಸ್ಟ್‌ ಕ್ರಿಕೆಟ್‌ ಅಭಿಮಾನಿಗಳು ಹೆಚ್ಚಿದ್ದಾರೆ. ಇಂಥ ಕಡೆಗಳಲ್ಲಿ ಮಾತ್ರ ಟೆಸ್ಟ್‌ ಕ್ರಿಕೆಟ್‌ ನಡೆಸುವಂತೆ 2019ರಲ್ಲೇ ವಿರಾಟ್‌ ಕೊಹ್ಲಿ ಸಲಹೆ ನೀಡಿದ್ದರು. ಇನ್ನು ಈ ಕ್ರೀಡಾಂಗಣಗಳಲ್ಲಿ ಅತ್ಯುತ್ತಮ ಒಳಚರಂಡಿ ವ್ಯವಸ್ಥೆ ಇದ್ದು, ವೃತ್ತಿಪರ ಮೈದಾನ ಸಿಬ್ಬಂದಿ ಸಹ ಇದ್ದಾರೆ.