ಸಾರಾಂಶ
ಬರ್ಮಿಂಗ್‌ಹ್ಯಾಮ್: ಚೊಚ್ಚಲ ಆವೃತ್ತಿಯ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಶನಿವಾರ ರಾತ್ರಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ನಾಯಕತ್ವದ ಭಾರತ ತಂಡ 5 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರಲ್ಲಿ 6 ವಿಕೆಟ್‌ಗೆ 156 ರನ್ ಕಲೆಹಾಕಿತು.
ಶೊಯೆಬ್ ಮಲಿಕ್ 41, ಕಮ್ರಾನ್ ಅಕ್ಮಲ್ 24, ಮಕ್ಸೂದ್ 21, ಸೊಹೈಲ್ ತನ್ವೀರ್ 19 ರನ್ ಗಳಿಸಿದರು. ಅನುರೀತ್ ಸಿಂಗ್ 3 ವಿಕೆಟ್ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ಭಾರತ 19.1 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು. ಅಂಬಟಿ ರಾಯುಡು 30 ಎಸೆತಗಳಲ್ಲಿ 50, ಗುರುಕೀರತ್ ಸಿಂಗ್ 34 ರನ್ ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಯೂಸುಫ್ ಪಠಾಣ್ 16 ಎಸೆತಗಳಲ್ಲಿ 30 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ರಾಯುಡು ಪಂದ್ಯಶ್ರೇಷ್ಠ, ಯೂಸುಫ್ ಪಠಾಣ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿದ್ದವು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಗುಂಪು ಹಂತದಲ್ಲೇ ಹೊರಬಿದ್ದಿದ್ದವು. ಬಳಿಕ ಸೆಮಿಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸಿದ್ದರೆ, ವೆಸ್ಟ್‌ಇಂಡೀಸ್ ವಿರುದ್ಧ ಗೆದ್ದು ಪಾಕಿಸ್ತಾನ ಫೈನಲ್‌ಗೇರಿತ್ತು.