ಸಾರಾಂಶ
ಹಾಂಕಾಂಗ್: ಹಾಂಕಾಂಗ್ ಅಂ.ರಾ. ಸಿಕ್ಸಸ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೋಲನುಭವಿಸಿದೆ. ಪ್ರತಿ ತಂಡದಲ್ಲಿ ತಲಾ 6 ಆಟಗಾರರು ಇರಲಿದ್ದು, ಪಂದ್ಯವು ತಲಾ 6 ಓವರ್‌ಗಳನ್ನು ಒಳಗೊಂಡಿರಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 6 ಓವರಲ್ಲಿ 2 ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿತು. ಕರ್ನಾಟಕದ ರಾಬಿನ್ ಉತ್ತಪ್ಪ ತಂಡದ ನಾಯಕರಾಗಿದ್ದು, ಅವರು 8 ಎಸೆತದಲ್ಲಿ 31 ರನ್ ಚಚ್ಚಿದ್ದರು. ರಾಜ್ಯದ ಮತ್ತೊಬ್ಬ ಆಟಗಾರ ಭರತ್ ಚಿಪ್ಲಿ 16 ಎಸೆತದಲ್ಲಿ 53 ರನ್ ಬಾರಿಸಿದರು. ಭಾರತದ ಇನ್ನಿಂಗ್ಸಲ್ಲಿ 8 ಸಿಕ್ಸರ್‌ಗಳಿದ್ದವು.
ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ 5 ಓವರಲ್ಲೇ 121 ರನ್ ಗಳಿಸಿ ಗುರಿ ತಲುಪಿತು. ಅಸಿಫ್ ಅಲಿ 14 ಎಸೆತದಲ್ಲಿ 55 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿ ಹೊರನಡೆದರು. ಮುಹಮ್ಮದ್ ಅಖ್ಲಾಕ್ 12 ಎಸೆತದಲ್ಲಿ 40 ರನ್ ಸಿಡಿಸಿದರೆ, ನಾಯಕ ಫಹೀಂ ಅಶ್ರಫ್ 5 ಎಸೆತದಲ್ಲಿ 22 ರನ್ ಬಾರಿಸಿದರು. ಪಾಕ್ ಇನ್ನಿಂಗ್ಸಲ್ಲಿ 14 ಸಿಕ್ಸರ್‌ಗಳಿದ್ದವು. ಶನಿವಾರ ಭಾರತ ತನ್ನ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ ಆಡಲಿದೆ. ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿವೆ. ಶನಿವಾರವೇ ಕ್ವಾರ್ಟರ್ ಫೈನಲ್ ನಡೆಯಲಿದ್ದು, ಭಾನುವಾರ ಸೆಮಿಫೈನಲ್, ಫೈನಲ್ ಪಂದ್ಯ ನಿಗದಿಯಾಗಿದೆ.