ಹಾರ್ದಿಕ್‌ ಗಾಯಗೊಂಡಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ. ಹಾರ್ದಿಕ್‌ ಫಿಟ್‌ ಇಲ್ವಂತೆ, ಟಿ20 ವಿಶ್ವಕಪ್‌ ಆಡಲ್ವಂತೆ ಎನ್ನುವ ಚರ್ಚೆಯೂ ಸಾಮಾಜಿಕ ತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ.

ಮುಂಬೈ: ಗಾಯದ ಸಮಸ್ಯೆಯಿಂದ ಹಲವು ದಿನಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತೊಮ್ಮೆ ಗಾಯಗೊಂಡಿದ್ದಾರಾ ಎನ್ನುವ ಚರ್ಚೆ ಕ್ರಿಕೆಟ್‌ ವಲಯದಲ್ಲಿ ಶುರುವಾಗಿದೆ.

ಮುಂಬೈ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್‌ ಗಾಯಗೊಂಡಂತೆ ಕಾಣುತ್ತಿದ್ದಾರೆ, ಗಾಯದ ವಿಷಯ ಮುಚ್ಚಿಡುತ್ತಿದ್ದಾರೆ ಎನಿಸುತ್ತಿದೆ ಎಂದು ನ್ಯೂಜಿಲೆಂಡ್‌ನ ವೀಕ್ಷಕ ವಿವರಣೆಗಾರ ಸೈಮನ್‌ ಡೂಲ್‌ ಹೇಳಿದ್ದಾರೆ.

ಈ ಐಪಿಎಲ್‌ನ ಮೊದಲ ಪಂದ್ಯದಲ್ಲಿ 3 ಓವರ್‌ ಬೌಲ್‌ ಮಾಡಿದ್ದ ಹಾರ್ದಿಕ್‌, 2ನೇ ಪಂದ್ಯದಲ್ಲಿ 4 ಓವರ್‌ ಕೋಟಾ ಪೂರ್ತಿಗೊಳಿಸಿದ್ದರು. ಆನಂತರ 2 ಪಂದ್ಯಗಳಲ್ಲಿ ಬೌಲ್‌ ಮಾಡದ ಅವರು, ಆರ್‌ಸಿಬಿ ವಿರುದ್ಧ ಕೇವಲ 1 ಓವರ್‌ ಎಸೆದಿದ್ದರು. ಗಾಯಗೊಂಡಿರುವ ಕಾರಣ ಅವರು ಹೆಚ್ಚು ಬೌಲ್‌ ಮಾಡುತ್ತಿಲ್ಲ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.

ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದ್ದು, ಹಾರ್ದಿಕ್‌ ಪಾಂಡ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹು ಮುಖ್ಯ ಎನಿಸಿದೆ. ಒಂದು ವೇಳೆ ಹಾರ್ದಿಕ್‌ ಗಾಯಗೊಂಡಿರುವುದು ನಿಜವಾಗಿ, ಅವರು ಟಿ20 ವಿಶ್ವಕಪ್‌ನಿಂದ ಹೊರಬಿದ್ದರೆ, ತಂಡಕ್ಕೆ ಹಾಗೂ ವೈಯಕ್ತಿಕವಾಗಿ ಹಾರ್ದಿಕ್‌ಗೆ ದೊಡ್ಡ ನಷ್ಟವಾಗಲಿದೆ.