ಸಾರಾಂಶ
ನವದೆಹಲಿ: 2025ರ ಐಪಿಎಲ್‌ನಲ್ಲೂ ಈ ಹಿಂದಿನ 3 ಆವೃತ್ತಿಗಳಂತೆ 74 ಪಂದ್ಯಗಳೇ ಇರಲಿವೆ. ಪಂದ್ಯದ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
2022ರಲ್ಲಿ ಹೊಸ ಮಾಧ್ಯಮ ಹಕ್ಕು ಹರಾಜು ನಡೆದಾಗ 2023 ಹಾಗೂ 2024ರ ಐಪಿಎಲ್‌ನಲ್ಲಿ ತಲಾ 74 ಪಂದ್ಯಗಳು, 2025 ಹಾಗೂ 2026ರಲ್ಲಿ ತಲಾ 84 ಪಂದ್ಯಗಳು ಹಾಗೂ 2027ರಲ್ಲಿ ಗರಿಷ್ಠ 94 ಪಂದ್ಯಗಳನ್ನು ನಡೆಸುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ ಭಾರತದ ತಾರಾ ಆಟಗಾರರ ನಿರಂತರ ಪಂದ್ಯಗಳ ಒತ್ತಡ ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ 74 ಪಂದ್ಯಗಳನ್ನೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಅಲ್ಲದೆ, ಭಾರತ 2025ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಪಂದ್ಯ ಜೂ.11ರಿಂದ ನಡೆಯಲಿದೆ. ಐಪಿಎಲ್ ಹೆಚ್ಚು ಕಾಲ ನಡೆದರೆ ಆಟಗಾರರಿಗೆ ಅಗತ್ಯ ವಿಶ್ರಾಂತಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸದಿರಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಮೈಸೂರಲ್ಲಿ ಯದುವೀರ್ ಭೇಟಿ ಮಾಡಿದ ಚಹಲ್
ಮೈಸೂರು: ಮೈಸೂರು-ಕೊಡಗು ಕ್ಷೇತ್ರದ ಸಂಸದ, ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಲ್ ಮೈಸೂರಿನಲ್ಲಿ ಭೇಟಿಯಾದರು. ಇದರ ಫೋಟೋವನ್ನು ಯದುವೀರ್ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಚಗಲ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಮೈಸೂರು ಯದುವೀರ್ ಒಡೆಯರ್‌ರನ್ನು ಭೇಟಿಯಾಗಿದ್ದು ವಿಶೇಷ ಗೌರವ’ ಎಂದಿದ್ದಾರೆ.