ಏಪ್ರಿಲ್‌ 8ರಿಂದ ಐಪಿಎಲ್‌ 2.0: ಮೇ 26ಕ್ಕೆ ಚೆನ್ನೈನಲ್ಲಿ ಫೈನಲ್‌

| Published : Mar 26 2024, 01:17 AM IST / Updated: Mar 26 2024, 08:56 AM IST

ಸಾರಾಂಶ

17ನೇ ಆವೃತ್ತಿ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿ. ಐಮೇ 19ಕ್ಕೆ ಲೀಗ್‌ ಹಂತ ಮುಕ್ತಾಯ. ಚೆನ್ನೈ, ಅಹ್ಮದಾಬಾದಲ್ಲಿ ನಾಕೌಟ್‌ ಪಂದ್ಯಗಳ ಆಯೋಜನೆ.

ನವದೆಹಲಿ: ಲೋಕಸಭೆ ಚುನಾವಣೆ ಕಾರಣದಿಂದಾಗಿ ಗೊಂದಲಕ್ಕೆ ಕಾರಣವಾಗಿದ್ದ 17ನೇ ಆವೃತ್ತಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. 

ಈ ಹಿಂದೆ ಐಪಿಎಲ್‌ನ ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದ ಬಿಸಿಸಿಐ ಸದ್ಯ ಎಲ್ಲಾ 74 ಪಂದ್ಯಗಳ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ವೇಳಾಪಟ್ಟಿ ಪ್ರಕಾರ ಏ.8ರಿಂದಲೇ ಐಪಿಎಲ್‌ನ 2ನೇ ಭಾಗ ಆರಂಭಗೊಳ್ಳಲಿದೆ. ಮೇ 19ಕ್ಕೆ ಲೀಗ್‌ ಹಂತದ ಪಂದ್ಯಗಳು ಕೊನೆಗೊಳ್ಳಲಿದ್ದು, ಮೇ 26ರಂದು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

ಈ ಹಿಂದೆ ಬಿಸಿಸಿಐ ಮಾ.22ರಿಂದ ಏ.7ರ ವರೆಗಿನ ಒಟ್ಟು 21 ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಿತ್ತು. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹಂತಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿರಲಿಲ್ಲ. ಆದರೆ ಸದ್ಯ ಚುನಾವಣೆ ದಿನಾಂಕ ಘೋಷಣೆಯಾಗಿರುವ ಕಾರಣ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ.

ಮೇ 21ರಿಂದ ನಾಕೌಟ್‌: ಟೂರ್ನಿಯ ನಾಕೌಟ್ ಪಂದ್ಯಗಳು ಮೇ 21ರಿಂದ ಆರಂಭಗೊಳ್ಳಲಿದೆ. ಕ್ವಾಲಿಫೈಯರ್‌ 1 ಮತ್ತು ಎಲಿಮಿನೇಟರ್‌ ಪಂದ್ಯಗಳು ಕ್ರಮವಾಗಿ ಮೇ 21 ಮತ್ತು 22ಕ್ಕೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಬಳಿಕ ಚೆನ್ನೈನಲ್ಲಿ ಕ್ವಾಲಿಫೈಯರ್‌ 2 ಮತ್ತು ಫೈನಲ್‌ ಪಂದ್ಯ ಕ್ರಮವಾಗಿ ಮೇ 24 ಮತ್ತು 26ಕ್ಕೆ ನಿಗದಿಯಾಗಿದೆ.

ಧರ್ಮಶಾಲಾ, ಗುವಾಹಟಿಯಲ್ಲೂ ಪಂದ್ಯ: ಈ ಬಾರಿ ಟೂರ್ನಿಗೆ ಧರ್ಮಶಾಲಾ, ಗುವಾಹಟಿ ಕ್ರೀಡಾಂಗಣಗಳೂ ಆತಿಥ್ಯ ವಹಿಸಲಿದೆ. ಪಂಜಾಬ್‌ ತನ್ನ 2 ತವರಿನ ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿದ್ದು, ಮೇ 5ಕ್ಕೆ ಚೆನ್ನೈ, ಮೇ 9ಕ್ಕೆ ಆರ್‌ಸಿಬಿ ವಿರುದ್ಧ ಸೆಣಸಾಡಲಿದೆ. ರಾಜಸ್ಥಾನ ತನ್ನ 2ನೇ ತವರಾದ ಗುವಾಹಟಿಯಲ್ಲಿ ಮೇ 15ಕ್ಕೆ ಪಂಜಾಬ್‌, ಮೇ 29ಕ್ಕೆ ಕೋಲ್ಕತಾ ವಿರುದ್ಧ ಆಡಲಿದೆ.

12 ವರ್ಷಗಳ ಬಳಿಕ ಚೆನ್ನೈನಲ್ಲಿ ಫೈನಲ್‌: ಚೆನ್ನೈ ಕ್ರೀಡಾಂಗಣ ಬರೋಬ್ಬರಿ 12 ವರ್ಷ ಬಳಿಕ ಐಪಿಎಲ್‌ನ ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಚೆಪಾಕ್‌ ಕ್ರೀಡಾಂಗಣ 2011, 2012ರಲ್ಲಿ ಸತತ 2 ವರ್ಷ ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಿತ್ತು. 2 ಬಾರಿಯೂ ಚೆನ್ನೈ ತಂಡ ಫೈನಲ್‌ಗೇರಿತ್ತು.