ಐಪಿಎಲ್‌ ರೀಟೆನ್ಶನ್‌ ಕುತೂಹಕ್ಕೆ ಇಂದು ತೆರೆ: ಯಾರು ಉಳೀತಾರೆ, ಯಾರು ಹೊರಬೀಳ್ತಾರೆ?

| Published : Oct 31 2024, 12:52 AM IST / Updated: Oct 31 2024, 12:53 AM IST

ಸಾರಾಂಶ

10 ತಂಡಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಪ್ರಕಟಕ್ಕೆ ಇಂದು ಡೆಡ್‌ಲೈನ್‌. ಪ್ರತಿ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳುವ ಅವಕಾಶ. ₹120 ಕೋಟಿಯಲ್ಲಿ ₹75 ಕೋಟಿ ಬಳಸಲು ಅನುಮತಿ. ಕೆಲ ನಾಯಕರೂ ಸೇರಿ ಪ್ರಮುಖರು ತಂಡದಿಂದ ಹೊರಬೀಳುವ ಸಾಧ್ಯತೆ

ನವದೆಹಲಿ: ಕೆಲ ತಿಂಗಳುಗಳಿಂದ ಫ್ರಾಂಚೈಸಿಗಳು, ಆಟಗಾರರು ಹಾಗೂ ಕ್ರಿಕೆಟ್‌ ಅಭಿಮಾನಿಗಳ ನಿದ್ದೆಗೆಡಿಸುತ್ತಿರುವ 2025ರ ಐಪಿಎಲ್‌ ರೀಟೆನ್ಷನ್‌ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದೆ. 18ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಫ್ರಾಂಚೈಸಿಗಳು ತಮ್ಮ ತಂಡದಲ್ಲೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಪ್ರಕಟಿಸಲು ಅ.31 ಅಂತಿಮ ದಿನವಾಗಿದ್ದು, ಯಾವ ಆಟಗಾರ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ, ಯಾವ ಆಟಗಾರರು ಹರಾಜು ಪಟ್ಟಿಯಲ್ಲಿರಲಿದ್ದಾರೆ ಎಂಬುದು ಗುರುವಾರ ಸಂಜೆ ವೇಳೆ ಬಹಿರಂಗಗೊಳ್ಳಲಿದೆ.ಈಗಾಗಲೇ ಐಪಿಎಲ್‌ ಆಡಳಿತ ಮಂಡಳಿಯು, ಕಳೆದ ಬಾರಿ ತಂಡದಲ್ಲಿದ್ದ ಆಟಗಾರರ ಪೈಕಿ ಗರಿಷ್ಠ ಆರು ಮಂದಿಯನ್ನು ಮುಂದಿನ ಆವೃತ್ತಿಗೂ ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಿದೆ. ಉಳಿದೆಲ್ಲಾ ಆಟಗಾರರನ್ನು ತಂಡ ಬಿಡುಗಡೆಗೊಳಿಸಲಿದೆ. ಗರಿಷ್ಠ ಐವರು ಅಂತಾರಾಷ್ಟ್ರೀಯ ಪಂದ್ಯವಾಡಿದ ಮತ್ತು ಗರಿಷ್ಠ ಇಬ್ಬರು ಅನ್‌ಕ್ಯಾಪ್ಡ್‌ (ಅಂತಾರಾಷ್ಟ್ರೀಯ ಪಂದ್ಯವಾಡದ) ಆಟಗಾರರು ಸೇರಿ ಗರಿಷ್ಠ 6 ಆಟಗಾರರನ್ನು ತಂಡ ರೀಟೈನ್‌ ಮಾಡಿಕೊಳ್ಳಬಹುದು.

ರೀಟೈನ್‌ ಮೊತ್ತ ಎಷ್ಟು?: ಸದ್ಯ ಪ್ರತಿ ಫ್ರಾಂಚೈಸಿ ಬಳಿ ತಲಾ ₹120 ಕೋಟಿ ಮೊತ್ತ ಇದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ.20ರಷ್ಟು ಅಧಿಕ. ₹120 ಕೋಟಿ ಪೈಕಿ ಆಟಗಾರರ ರೀಟೈನ್‌ಗಾಗಿ ಫ್ರಾಂಚೈಸಿಯು ಒಟ್ಟು ₹75 ಕೋಟಿ ವರೆಗೂ ವೆಚ್ಚ ಮಾಡಬಹುದು. ಅಂದರೆ ಮೊದಲ ರೀಟೈನ್‌ ಆಟಗಾರನಿಗೆ ₹18 ಕೋಟಿ, 2ನೇ ಆಟಗಾರನಿಗೆ ₹14 ಕೋಟಿ, 3ನೇ ಆಟಗಾರನಿಗೆ ₹11 ಕೋಟಿ, 4ನೇ ಆಟಗಾರನಿಗೆ ₹18 ಕೋಟಿ ಹಾಗೂ 5ನೇ ಆಟಗಾರನಿಗೆ ₹14 ಕೋಟಿ ನೀಡಬಹುದು. ಅನ್‌ಕ್ಯಾಪ್ಡ್‌ ಆಟಗಾರರಿಗೆ ಫ್ರಾಂಚೈಸಿಯು ₹4 ಕೋಟಿ ನೀಡಬೇಕಿದೆ. ಫ್ರಾಂಚೈಸಿಯು ಯಾವುದೇ ಆಟಗಾರನಿಗೆ ಬಿಸಿಸಿಐ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತ ನೀಡಬಹುದು. ಆದರೆ ಒಟ್ಟಾರೆ ₹75 ಕೋಟಿ ಮೀರುವಂತಿಲ್ಲ.ಇದೆ ಆರ್‌ಟಿಎಮ್‌ ಅವಕಾಶ: ಯಾವುದೇ ಫ್ರಾಂಚೈಸಿ 6ಕ್ಕಿಂತ ಕಡಿಮೆ ಆಟಗಾರರನ್ನು ರೀಟೈನ್‌ ಮಾಡಿಕೊಂಡರೆ, ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌(ಆರ್‌ಟಿಎಂ) ಅವಕಾಶ ಸಿಗುತ್ತದೆ. ಉದಾಹರಣೆಗೆ ಒಂದು ತಂಡ 4 ಆಟಗಾರರನ್ನು ರೀಟೈನ್‌ ಮಾಡಿಕೊಂಡರೆ ಇನ್ನಿಬ್ಬರು ಆಟಗಾರರನ್ನು ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್‌ ಬಳಸಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಅಂದರೆ ತಾನು ಬಿಡುಗಡೆಗೊಳಿಸಿದ ಆಟಗಾರನಿಗೆ ಬೇರೆ ಯಾವುದೇ ತಂಡ ಬಿಡ್‌ ಮಾಡಿದರೆ, ಆ ಆಟಗಾರನನ್ನು ಮತ್ತೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಬಹುದು.

ಗುರುವಾರ ಎಲ್ಲಾ ತಂಡಗಳು ರೀಟೈನ್‌ ಪಟ್ಟಿ ಪ್ರಕಟಗೊಳಿಸಲಿದ್ದು, ಇತರ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಈ ಬಾರಿ ಹರಾಜು ಪ್ರಕ್ರಿಯೆ ನವೆಂಬರ್‌ ಕೊನೆ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.