ಸಾರಾಂಶ
ಬೆಂಗಳೂರು: ಐಪಿಎಲ್‌ನ ಆರ್‌ಸಿಬಿ ತಂಡದಲ್ಲೇ 2027ರ ವರೆಗೂ ಮುಂದುವರಿಯುವ ಬಗ್ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ. ಈ ಬಗ್ಗೆ ‘ಆರ್‌ಸಿಬಿ ಬೋಲ್ಡ್ ಡೈರೀಸ್’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿ, ‘ಆರ್‌ಸಿಬಿ ಪರ ಆಡಲು ಶುರುಮಾಡಿ ಈ ಋತು(2025-27)ವಿನ ಅಂತ್ಯಕ್ಕೆ 20 ವರ್ಷವಾಗಲಿದೆ.
ಇದು ನನಗೆ ತುಂಬಾ ವಿಶೇಷ ಕ್ಷಣ. ನಾನು ಒಂದು ತಂಡದ ಪರ ಇಷ್ಟು ವರ್ಷಗಳ ಕಾಲ ಆಡುತ್ತೇನೆ ಅಂದುಕೊಂಡಿರಲಿಲ್ಲ. ನಾನು ಯಾವತ್ತೂ ಆರ್‌ಸಿಬಿ ಹೊರತುಪಡಿಸಿ ಬೇರೆ ತಂಡದ ಪರ ಆಡುವುದನ್ನು ಚಿಂತಿಸಿಯೇ ಇಲ್ಲ.
ಈ ಬಾರಿ ಹೊಸ ತಂಡವನ್ನು ಕಟ್ಟುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ’ ಎಂದಿದ್ದಾರೆ. ವಿರಾಟ್ 2008ರ ಚೊಚ್ಚಲ ಆವೃತ್ತಿಯಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. ಈ ಬಾರಿ ಅವರನ್ನು ಫ್ರಾಂಚೈಸಿಯು 21 ಕೋಟಿ ರು. ನೀಡಿ ರೀಟೈನ್ ಮಾಡಿಕೊಂಡಿದೆ.
ಏಕದಿನ: ವಿಂಡೀಸ್ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್ ಜಯ
ಆ್ಯಂಟಿಗಾ: ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 6 ವಿಕೆಟ್‌ಗೆ 328 ರನ್ ಕಲೆಹಾಕಿತು.
ಶಾಯ್ ಹೋಪ್ 117, ಕೀಸಿ ಕಾರ್ಟಿ 71, ಶೆರ್ಫಾನೆ ರುಥರ್‌ಫೋರ್ಡ್ 54 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಇಂಗ್ಲೆಂಡ್ ನಾಯಕ ಲಿಯಾಮ್ ಲಿವಿಂಗ್‌ಸ್ಟೋನ್ ಭರ್ಜರಿ ಶತಕದ ನೆರವಿನಿಂದ 47.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಲಿವಿಂಗ್‌ಸ್ಟೋನ್ 85 ಎಸೆತಗಳಲ್ಲಿ ಔಟಾಗದೆ 124 ರನ್ ಸಿಡಿಸಿದರು. ಫಿಲ್ ಸಾಲ್ಟ್ 59, ಸ್ಯಾಮ್ ಕರ್ರನ್ 52, ಜೇಕಬ್ ಬೆಥೆಲ್ 55 ರನ್ ಗಳಿಸಿದರು.