ಐಪಿಎಲ್‌ಗೆ ಕೈಕೊಡುವ ವಿದೇಶಿ ಆಟಗಾರರ ಬಗ್ಗೆ ಕ್ರಮಕ್ಕೆ ಬಿಸಿಸಿಐ ಮೇಲೆ ಫ್ರಾಂಚೈಸಿಗಳ ಒತ್ತಡ

| Published : Aug 01 2024, 02:18 AM IST / Updated: Aug 01 2024, 05:04 AM IST

ಸಾರಾಂಶ

ಐಪಿಎಲ್‌ಗೆ ಕೈಕೊಡುವ ವಿದೇಶಿ ಆಟಗಾರರ ಬಗ್ಗೆ ಕ್ರಮಕ್ಕೆ ಬಿಸಿಸಿಐ ಮೇಲೆ ಫ್ರಾಂಚೈಸಿಗಳ ಒತ್ತಡ. ಇನ್ನು ಹರಾಜಿನಲ್ಲಿ ಬಿಕರಿಯಾದ ಮೇಲೆ ಐಪಿಎಲ್‌ಗೆ ಗೈರಾಗುವಂತಿಲ್ಲ?

ಮುಂಬೈ: ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿ, ಬಳಿಕ ಟೂರ್ನಿ ಆರಂಭಗೊಳ್ಳುವುದಕ್ಕೆ ಕೆಲವೇ ದಿನ ಬಾಕಿ ಇರುವಾಗ ವೈಯಕ್ತಿಕ ಕಾರಣಗಳ ನೆಪ ಹೇಳಿ ಕೈಕೊಡುವ ವಿದೇಶಿ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಐಪಿಎಲ್‌ ತಂಡಗಳ ಮಾಲಿಕರು ಬಿಸಿಸಿಐಗೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ತನ್ನ ಕೇಂದ್ರ ಕಚೇರಿಯಲ್ಲಿ ಐಪಿಎಲ್‌ ತಂಡಗಳ ಮಾಲಿಕರ ಜೊತೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಿದರು. 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಮುಖವಾಗಿ ಆಟಗಾರರ ಹರಾಜಿಗೂ ಮುನ್ನ ಎಷ್ಟು ಜನ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಎಲ್ಲಾ ಫ್ರಾಂಚೈಸಿಗಳು ಕನಿಷ್ಠ 5-6 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳಿರುವುದಾಗಿ ಗೊತ್ತಾಗಿದೆ. ಕೆಲ ಫ್ರಾಂಚೈಸಿಗಳು 8 ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಿದರು ಎನ್ನಲಾಗಿದೆ.

ಇದೇ ವೇಳೆ ಇಂಪ್ಯಾಕ್ಟ್‌ ಆಟಗಾರ ನಿಯಮವನ್ನು ಕೈಬಿಡುವಂತೆಯೂ ಫ್ರಾಂಚೈಸಿಗಳು ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ.