ಸರ್ಫರಾಜ್‌ ಖಾನ್‌ ದ್ವಿಶತಕದ ಅಬ್ಬರ : ಇರಾನಿ ಕಪ್‌ನಲ್ಲಿ ಮುಂಬೈ ಬರೋಬ್ಬರಿ 536 ರನ್‌

| Published : Oct 03 2024, 01:31 AM IST / Updated: Oct 03 2024, 04:48 AM IST

ಸಾರಾಂಶ

ಇರಾನಿ ಕಪ್‌: ಶೇಷ ಭಾರತ ವಿರುದ್ಧ ಮುಂಬೈ ಬೃಹತ್‌ ಮೊತ್ತ. ರಹಾನೆ(97) ಶತಕದ ಅಂಚಿನಲ್ಲಿದ್ದಾಗ ಯಶ್‌ ದಯಾಳ್‌ ಎಸೆತದಲ್ಲಿ ಧ್ರುವ್‌ ಜುರೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಲಖನೌ: ಶೇಷ ಭಾರತ(ರೆಸ್ಟ್‌ ಆಫ್ ಇಂಡಿಯಾ) ವಿರುದ್ಧದ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಮುಂಬೈ ಬೃಹತ್‌ ಮೊತ್ತ ದಾಖಲಿಸಿದೆ. ಯುವ ಬ್ಯಾಟರ್‌ ಸರ್ಫರಾಜ್‌ ಖಾನ್‌ ಆಕರ್ಷಕ ದ್ವಿಶತಕದ ನೆರವಿನಿಂದ ಮುಂಬೈ 2ನೇ ದಿನದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 536 ರನ್‌ ಕಲೆಹಾಕಿದೆ. 

ಆರಂಭಿಕ ಕುಸಿತದ ಹೊರತಾಗಿಯೂ ಮೊದಲ ದಿನ 4 ವಿಕೆಟ್‌ಗೆ 237 ರನ್‌ ಗಳಿಸಿದ್ದ ಮುಂಬೈ ಬುಧವಾರವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದ ನಾಯಕ ಅಜಿಂಕ್ಯಾ ರಹಾನೆ ಹಾಗೂ ಸರ್ಫರಾಜ್‌, 5ನೇ ವಿಕೆಟ್‌ಗೆ 130 ರನ್‌ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ರಹಾನೆ(97) ಶತಕದ ಅಂಚಿನಲ್ಲಿದ್ದಾಗ ಯಶ್‌ ದಯಾಳ್‌ ಎಸೆತದಲ್ಲಿ ಧ್ರುವ್‌ ಜುರೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. 

ಬಳಿಕ 7ನೇ ವಿಕೆಟ್‌ಗೆ ಜೊತೆಯಾದ ಸರ್ಫರಾಜ್‌ ಹಾಗೂ ತನುಶ್‌ ಕೋಟ್ಯನ್‌ ಶೇಷ ಭಾರತ ಬೌಲರ್‌ಗಳನ್ನು ಚೆಂಡಾಡಿದರು. ಈ ಜೋಡಿ 254 ಎಸೆತಗಳಲ್ಲಿ 183 ರನ್‌ ಸಿಡಿಸಿದರು. ಈ ನಡುವೆ ತನುಶ್‌(64) ಔಟಾದರೂ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಸರ್ಫರಾಜ್‌ ದ್ವಿಶತಕ ಪೂರ್ಣಗೊಳಿಸಿದರು.

ಶತಕದ ಅಂಚಿನಲ್ಲಿದ್ದಾಗ ಪ್ರಸಿದ್ಧ್‌ ಕೃಷ್ಣ ಬಿಟ್ಟ ಕ್ಯಾಚ್‌ನ ಲಾಭ ಪಡೆದ ಸರ್ಫರಾಜ್‌, ಸದ್ಯ 276 ಎಸೆತಗಳಲ್ಲಿ 25 ಬೌಂಡರಿ, 4 ಸಿಕ್ಸರ್‌ನೊಂದಿಗೆ 221 ರನ್‌ ಸಿಡಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 10ನೇ ಕ್ರಮಾಂಕದಲ್ಲಿ ಆಡಿದ ಶಾರ್ದೂಲ್‌ ಠಾಕೂರ್‌ 36 ರನ್‌ ಕೊಡುಗೆ ನೀಡಿದರು. ಶೇಷ ಭಾರತ ಪರ ಮುಕೇಶ್‌ ಕುಮಾರ್‌ 4, ಯಶ್‌ ದಯಾಳ್‌ ಹಾಗೂ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್: ಮುಂಬೈ 536/9 (2ನೇ ದಿನದಂತ್ಯಕ್ಕೆ) (ಸರ್ಫರಾಜ್‌ ಔಟಾಗದೆ 221, ರಹಾನೆ 97, ತನುಶ್‌ 64, ಮುಕೇಶ್‌ 4-109, ಯಶ್‌ 2-89, ಪ್ರಸಿದ್ಧ್‌ 2-102)

ದ್ವಿಶತಕ ಬಾರಿಸಿದ ಐದನೇ ಆಟಗಾರ

ಸರ್ಫರಾಜ್‌ ಇರಾನಿ ಕಪ್‌ನಲ್ಲಿ ದ್ವಿಶತಕ ಬಾರಿಸಿದ ಮುಂಬೈನ ಮೊದಲ, ಒಟ್ಟಾರೆ 5ನೇ ಬ್ಯಾಟರ್‌. ಇದಕ್ಕೂ ಮುನ್ನ ವಾಸಿಂ ಜಾಫರ್‌ ವಿದರ್ಭ ಪರ, ರವಿ ಶಾಸ್ತ್ರಿ, ಪ್ರವೀಣ್‌ ಆಮ್ರೆ, ಯಶಸ್ವಿ ಜೈಸ್ವಾಲ್‌ ಶೇಷ ಭಾರತ ತಂಡದ ಪರ ದ್ವಿಶತಕ ಹೊಡೆದಿದ್ದಾರೆ.