ಸಾರಾಂಶ
ಬೆಂಗಳೂರು: ಕರ್ನಾಟಕ ತಂಡ ತೊರೆಯುವ ತಾರಾ ಆಟಗಾರರ ಪಟ್ಟಿ ಬೆಳೆಯುತ್ತಲೇ ಇದೆ. ರಾಜ್ಯ ತಂಡದ ಆಟಗಾರರಾದ ಜಗದೀಶ್ ಸುಚಿತ್ ಹಾಗೂ ದೆಗಾ ನಿಶ್ಚಲ್ ಈ ಋತುವಿನಲ್ಲಿ ನಾಗಾಲ್ಯಾಂಡ್ ಪರ ಆಡಲು ನಿರ್ಧರಿಸಿದ್ದಾರೆ.ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಗೆ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಲು ಮನವಿ ಮಾಡಿದ್ದಾರೆ ಎಂದು ಸಂಸ್ಥೆಯ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದೆ.
ಆಲ್ರೌಂಡರ್ ಸುಚಿತ್ 2014-15ರಲ್ಲಿ ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಈವರೆಗೂ 17 ಪ್ರಥಮ ದರ್ಜೆ, 36 ಲಿಸ್ಟ್ ‘ಎ’ ಪಂದ್ಯಗಳನ್ನಾಡಿದ್ದಾರೆ. ಬ್ಯಾಟರ್ ನಿಶ್ಚಲ್ 2017ರಲ್ಲಿ ರಾಜ್ಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಈ ವರೆಗೂ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 4 ಶತಕ ಸೇರಿ 989 ರನ್ ಬಾರಿಸಿದ್ದಾರೆ.
ಅನುಜ್-ಸುಜಲ್ 241 ರನ್ ಜೊತೆಯಾಟ: ಟಿ20 ಕ್ರಿಕೆಟ್‌ನಲ್ಲಿ 2ನೇ ಗರಿಷ್ಠ
ನವದೆಹಲಿ: ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಪುರಾಣಿ ದಿಲ್ಲಿ ವಿರುದ್ಧ ಈಸ್ಟ್ ಡೆಲ್ಲಿ ತಂಡದ ಆಟಗಾರರಾದ ಅನುಜ್ ರಾವತ್ ಹಾಗೂ ಸುಜಲ್ ಸಿಂಗ್ ಮೊದಲ ವಿಕೆಟ್‌ಗೆ 241 ರನ್ ಜೊತೆಯಾಟವಾಡಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲಾದ 2ನೇ ಗರಿಷ್ಠ ರನ್ ಜೊತೆಯಾಟ. ಕಳೆದ ಫೆಬ್ರವರಿಯಲ್ಲಿ ಚೀನಾ ವಿರುದ್ಧ ಜಪಾನ್ ತಂಡದ ಯಮಮೊಟೊ-ಕೆಂಡೆಲ್ ಫ್ಲೆಮಿಂಗ್ 258 ರನ್ ಜೊತೆಯಾಟವಾಡಿದ್ದು ದಾಖಲೆ. ಪಂದ್ಯದಲ್ಲಿ ಅನುಜ್ 121, ಸುಜಲ್ 108 ರನ್ ಸಿಡಿಸಿದರು. ಇಬ್ಬರೂ ಪೂರ್ತಿ 20 ಓವರ್ ಆಡಿದರು.