ಇಟಲಿಯ ಹುಡುಗ ಸಿನ್ನರ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ವಿನ್ನರ್‌

| Published : Sep 10 2024, 01:32 AM IST

ಸಾರಾಂಶ

ವಿಶ್ವ ನಂ.1 ಸಿನ್ನರ್‌ಗೆ ಚೊಚ್ಚಲ ಯುಎಸ್ ಓಪನ್‌ ಕಿರೀಟ. ಫೈನಲ್‌ನಲ್ಲಿ ಅಮೆರಿಕದ ಟೇಲರ್‌ ಫ್ರಿಟ್ಜ್‌ ವಿರುದ್ಧ ನೇರ ಸೆಟ್‌ಗಳಲ್ಲಿ ಗೆಲುವು. ಆಸ್ಟ್ರೇಲಿಯನ್‌ ಓಪನ್‌ ಬಳಿಕ ಮತ್ತೆ ಗ್ರ್ಯಾನ್‌ಸ್ಲಾಂ ಗೆದ್ದ ಇಟಲಿಯ ಸಿನ್ನರ್‌. ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ಫ್ರಿಟ್ಜ್‌ ಕನಸು ಭಗ್ನ

ನ್ಯೂಯಾರ್ಕ್‌: ಟೆನಿಸ್‌ ಲೋಕದ ಯುವ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ವಿಶ್ವ ನಂ.1 ಯಾನ್ನಿಕ್‌ ಸಿನ್ನರ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಚೊಚ್ಚಲ ಯುಎಸ್‌ ಓಪನ್‌ ಫೈನಲ್‌ನಲ್ಲೇ ಇಟಲಿಯ ಯುವ ಟೆನಿಸಿಗ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.ಭಾನುವಾರ ಮಧ್ಯರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 23 ವರ್ಷದ ಸಿನ್ನರ್‌, ಅಮೆರಿಕದ ಟೇಲರ್‌ ಫ್ರಿಟ್ಜ್‌ ವಿರುದ್ಧ 6-3, 6-4, 7-5 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಫ್ರಿಟ್ಜ್‌ ಕನಸು ಭಗ್ನಗೊಂಡಿತು. ಫ್ರಿಟ್ಜ್‌ಗೆ ಕಳೆದ 21 ವರ್ಷಗಳಲ್ಲೇ ಯುಎಸ್‌ ಓಪನ್‌ ಗೆದ್ದ ಅಮೆರಿಕದ ಮೊದಲ ಪುರುಷ ಟೆನಿಸಿಗ ಎನಿಸಿಕೊಳ್ಳುವ ಅವಕಾಶವಿತ್ತು. ಆದರೆ ಸಿನ್ನರ್‌ರ ಪ್ರಬಲ ಹೊಡೆತಗಳ ಮುಂದೆ ಮಂಡಿಯೂರಿದ ವಿಶ್ವ ನಂ.12 ಫ್ರಿಟ್ಜ್‌, ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲೇ ಸೋಲಿನ ರುಚಿ ಅನುಭವಿಸಿದರು. 2ನೇ ಗ್ರ್ಯಾನ್‌ಸ್ಲಾಂ: ಈ ಗೆಲುವಿನೊಂದಿಗೆ ಸಿನ್ನರ್‌ ತಮ್ಮ 2ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದುಕೊಂಡರು. 2024ರ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಡ್ಯಾನಿಲ್‌ ಮೆಡ್ವೆಡೆವ್‌ ವಿರುದ್ಧ ಗೆದ್ದು ಸಿನ್ನರ್‌ ಚಾಂಪಿಯನ್‌ ಆಗಿದ್ದರು. ಸಿನ್ನರ್‌ ತಾವಾಡಿದ ಎರಡೂ ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲಿ ಗೆದ್ದಿದ್ದಾರೆ. ಟ್ರೋಫಿ ಗೆದ್ದ ಇಟಲಿಯ ಮೊದಲ ಪುರುಷ ಟೆನಿಸಿಗ

ಸಿನ್ನರ್‌ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಇಟಲಿಯ ಮೊದಲ ಟೆನಿಸಿಗ ಎನಿಸಿಕೊಂಡರು. ಈ ಮೊದಲು ಯುಎಸ್‌ ಓಪನ್‌ ಮಹಿಳಾ ಸಿಂಗಲ್ಸ್‌ನಲ್ಲಿ 2015ರಲ್ಲಿ ಫ್ಲಾವಿಯಾ ಪೆನ್ನೆಟ್ಟಾ ಚಾಂಪಿಯನ್‌ ಆಗಿದ್ದರು.

₹30.23 ಕೋಟಿ: ಚಾಂಪಿಯನ್‌ ಸಿನ್ನರ್‌ 3,600,000 ಅಮೆರಿಕನ್‌ ಡಾಲರ್(ಅಂದಾಜು ₹30.23 ಕೋಟಿ) ನಗದು ಬಹುಮಾನ ಪಡೆದರು.₹15.11 ಕೋಟಿ: ರನ್ನರ್‌-ಅಪ್‌ ಫ್ರಿಟ್ಜ್‌ 1,800,000 ಅಮೆರಿಕನ್‌ ಡಾಲರ್‌(ಅಂದಾಜು ₹15.11 ಕೋಟಿ) ನಗದು ಪಡೆದರು.

ಈ ವರ್ಷದ 4 ಗ್ರ್ಯಾನ್‌ಸ್ಲಾಂ ಆಲ್ಕರಜ್‌, ಸಿನ್ನರ್‌ ಪಾಲು!

ಟೆನಿಸ್‌ ಲೋಕವನ್ನು ಇನ್ನೊಂದಿಷ್ಟು ಕಾಲ ಆಳುವ ವಿಶ್ವಾಸ ಮೂಡಿಸಿರುವ ಇಬ್ಬರು ಸೂಪರ್‌ಸ್ಟಾರ್‌ಗಳಾದ ಸ್ಪೇನ್‌ನ ಕಾರ್ಲೊಸ್‌ ಆಲ್ಕರಜ್‌ ಹಾಗೂ ಇಟಲಿನ ಸಿನ್ನರ್‌, ಈ ವರ್ಷದ 4 ಗ್ರ್ಯಾನ್‌ಸ್ಲಾಂ ಟ್ರೋಫಿಗಳಲ್ಲಿ ತಲಾ 2 ಗೆದ್ದಿದ್ದಾರೆ. ಫ್ರೆಂಚ್ ಓಪನ್‌ ಹಾಗೂ ವಿಂಬಲ್ಡನ್‌ನಲ್ಲಿ 21 ವರ್ಷದ ಆಲ್ಕರಜ್‌ ಚಾಂಪಿಯನ್‌ ಆಗಿದ್ದರೆ, ಆಸ್ಟ್ರೇಲಿಯನ್‌ ಓಪನ್‌ ಹಾಗೂ ಯುಎಸ್‌ ಓಪನ್‌ನಲ್ಲಿ ಸಿನ್ನರ್‌ ಪ್ರಶಸ್ತಿ ಗೆದ್ದಿದ್ದಾರೆ.