ಬೂಮ್ರಾ, ಕುಲ್ದೀಪ್‌ ಗಾಯದಿಂದಾಗಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡ ಪ್ರಕಟ ವಿಳಂಬ?

| Published : Jan 14 2025, 01:00 AM IST / Updated: Jan 14 2025, 04:11 AM IST

ಸಾರಾಂಶ

ಚಾಂಪಿಯನ್ಸ್‌ ಟ್ರೋಫಿ: ಜ.12ಕ್ಕೆ ಗಡುವು ನೀಡಿದ್ದ ಐಸಿಸಿ. ಆದರೆ ಇನ್ನೂ ತಂಡ ಪ್ರಕಟಗೊಳಿಸದ ಟೀಂ ಇಂಡಿಯಾ. ಈ ವಾರದ ಅಂತ್ಯಕ್ಕೆ ಆಟಗಾರರ ಹೆಸರು ಘೋಷಣೆ ಸಾಧ್ಯತೆ.

ನವದೆಹಲಿ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಹಾಗೂ ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತನ್ನ ತಂಡವನ್ನು ಪ್ರಕಟಿಸಲು ವಿಳಂಬ ಮಾಡುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಫೆ.19ರಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಇದಕ್ಕೆ 5 ವಾರ ಮೊದಲು ಅಂದರೆ ಜ.12ಕ್ಕೆ ಎಲ್ಲಾ ತಂಡಗಳು ಆಟಗಾರರ ಹೆಸರು ಪ್ರಕಟಿಸಬೇಕಿತ್ತು. ಆದರೆ ಭಾರತ ತಂಡ ಇನ್ನೂ ಘೋಷಣೆಯಾಗಿಲ್ಲ. ಪ್ರಮುಖ ಆಟಗಾರರಾದ ಬೂಮ್ರಾ ಹಾಗೂ ಕುಲ್ದೀಪ್‌ ಗಾಯಗೊಂಡಿರುವ ಕಾರಣ ತಂಡ ಘೋಷಣೆ ಗಡುವು ವಿಸ್ತರಿಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ ಎನ್ನಲಾಗುತ್ತಿದೆ. 

ಬೂಮ್ರಾ ಬೆನ್ನು ನೋವಿಗೆ ತುತ್ತಾಗಿದ್ದು, ಮಾರ್ಚ್‌ ಮೊದಲ ವಾರ ಗುಣಮುಖರಾಗಲಿದ್ದಾರೆ ಎನ್ನಲಾಗುತ್ತಿದೆ. ಕುಲ್ದೀಪ್‌ ತೊಡೆಸಂದು ಗಾಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ತಿಂಗಳ ಅಂತ್ಯಕ್ಕೆ ಫಿಟ್‌ ಆಗುವ ನಿರೀಕ್ಷೆಯಿದೆ. ಆದರೆ ಇಬ್ಬರ ಗಾಯದ ಬಗ್ಗೆಯೂ ಯಾವುದೇ ಸ್ಪಷ್ಟತೆ ಸಿಗದ ಕಾರಣ ತಂಡಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬ ಗೊಂದಲ ಬಿಸಿಸಿಐಗೆ ಇದೆ. ಇದರ ಹೊರತಾಗಿಯೂ ಈ ವಾರದ ಅಂತ್ಯಕ್ಕೆ ತಂಡ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಿದೆ.