ಸಾರಾಂಶ
ಮೆಲ್ಬರ್ನ್: ಆಸ್ಟ್ರೇಲಿಯಾ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ‘ಎ’ ತಂಡ ಕೇವಲ 161 ರನ್‌ಗೆ ಆಲೌಟ್ ಆಗಿದೆ. ಆಸೀಸ್ ವೇಗಿಗಳಿಂದ ಎದುರಾದ ಬೌನ್ಸ್ ಪರೀಕ್ಷೆಯಲ್ಲಿ ಫೇಲಾದ ಭಾರತ, ಮೊದಲ ದಿನವೇ ಮತ್ತೊಂದು ಸೋಲಿನತ್ತ ಮುಖ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧ ಇದೇ ತಿಂಗಳು 22ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆ.ಎಲ್.ರಾಹುಲ್ ಕೇವಲ 4 ರನ್‌ಗೆ ಔಟಾದರೆ, ವಿಕೆಟ್ ಕೀಪರ್ ಧೃವ್ ಜುರೆಲ್ ಕಠಿಣ ಪರಿಸ್ಥಿತಿಯಲ್ಲಿ ಆಕರ್ಷಕ ಆಟವಾಡಿ 80 (186 ಎಸೆತ) ರನ್ ಗಳಿಸಿದರು. ಭಾರತ ‘ಎ’ನ ಮೊದಲ ಇನ್ನಿಂಗ್ಸ್ ಕೇವಲ 57.1 ಓವರಲ್ಲೇ ಕೊನೆಗೊಂಡಿತು.
ರಾಹುಲ್ ವಿರುದ್ಧ ಬೌಲ್ ಮಾಡಲು ಕಾತರಿಸುತ್ತಿದ್ದೇನೆ ಎಂದಿದ್ದ ಆಸೀಸ್ ವೇಗಿ ಸ್ಕಾಟ್ ಬೋಲೆಂಡ್, ಕರ್ನಾಟಕ ಬ್ಯಾಟರ್‌ನ ವಿಕೆಟ್ ಕಬಳಿಸಿದ್ದು ಕಾಕತಾಳೀಯ ಎನಿಸಿತು.ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್ ಇಬ್ಬರೂ ಸೊನ್ನೆಗೆ ಔಟಾದರೆ, ನಾಯಕ ಋತುರಾಜ್ ಗಾಯಕ್ವಾಡ್ 4 ರನ್ ಗಳಿಸಿದರು. ದೇವದತ್ ಪಡಿಕ್ಕಲ್ ಆಟ 26 ರನ್‌ಗೆ ಕೊನೆಗೊಂಡಿತು.ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ‘ಎ’ ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿ, 108 ರನ್ ಹಿನ್ನಡೆಯಲ್ಲಿದೆ.