ಸಾರಾಂಶ
ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ನ 3ನೇ ದಿನದಾಟವೂ ರದ್ದಾಯಿತು. ಭಾನುವಾರ ಮಳೆ ಬೀಳಲಿಲ್ಲ. ಮಧ್ಯಾಹ್ನ 2 ಗಂಟೆ ವೇಳೆಗೆ ಸುಡು ಬಿಸಿಲಿತ್ತು. ಆದರೂ ಶನಿವಾರ ಮಳೆ ಸುರಿದಿದ್ದರಿಂದ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. ಭಾನುವಾರವೂ ಮೈದಾನದ ಕೆಲವೆಡೆ ನೀರು ನಿಂತಿದ್ದ ಕಾರಣ, ದಿನದಾಟವನ್ನು ಆರಂಭಿಸದೆ ಇರಲು
ಅಂಪೈರ್‌ಗಳು ನಿರ್ಧರಿಸಿದರು. ಮೊದಲ ದಿನ ಬಾಂಗ್ಲಾ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿ 35 ಓವರಲ್ಲಿ 3 ವಿಕೆಟ್‌ಗೆ 107 ರನ್ ಗಳಿಸಿತ್ತು. ಅಭಿಮಾನಿಗಳಿಗೆ ನಿರಾಸೆ: ಭಾನುವಾರ ಪಂದ್ಯ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ದಿನದಾಟ ರದ್ದಾಗಿದ್ದರಿಂದ ಎಲ್ಲರೂ ನಿರಾಸೆಯೊಂದಿಗೆ ಹೊರನಡೆದರು. ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣ, ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಅಡಿಯಲ್ಲಿಲ್ಲ. ಅದು ಸ್ಥಳೀಯ ಮುನ್ಸಿಪಾಲಿಟಿಯ ನಿಯಂತ್ರಣದಲ್ಲಿದ್ದು, ಇಲ್ಲಿನ ವ್ಯವಸ್ಥೆ ತೀರಾ ಕಳಪೆಯಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಕ್ರೀಡಾಂಗಣದ ಒಂದು ಭಾಗದಲ್ಲಿರುವ ಪ್ರೇಕ್ಷಕರ ಗ್ಯಾಲರಿ ಕುಸಿಯುವ ಭೀತಿ ಸಹ ಇದೆ.ಭಾರತಕ್ಕೆ ನಷ್ಟ?
ಮೊದಲ ಪಂದ್ಯವನ್ನು 280 ರನ್‌ಗಳಿಂದ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲೂ ಬಾಂಗ್ಲಾವನ್ನು ಹೊಸಕಿಹಾಕಿ 12 ಅಂಕ ಸಂಪಾದಿಸುವ ವಿಶ್ವಾಸದಲ್ಲಿತ್ತು. ಆದರೆ ಈಗಾಗಲೇ 3 ದಿನ ವ್ಯರ್ಥವಾಗಿದ್ದು, ಇನ್ನೆರಡೇ ದಿನ ಬಾಕಿ ಇದೆ. ಪಂದ್ಯ ಬಹುತೇಕ ಡ್ರಾಗೊಳ್ಳಲಿದೆ ಎನ್ನುವ ರೀತಿ ಕಂಡು ಬರುತ್ತಿದ್ದು, ಭಾರತಕ್ಕೆ ಕೇವಲ 4 ಸಿಗುವ ಸಾಧ್ಯತೆಯೇ ಹೆಚ್ಚು. ಹೀಗಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು.