ಸಾರಾಂಶ
ಮಂಗಳೂರು: 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.ಶುಕ್ರವಾರ ಕೊನೆಗೊಂಡ ಕೂಟದಲ್ಲಿ ರಾಜ್ಯದ ಈಜುಪಟುಗಳು 17 ಚಿನ್ನ, 12 ಬೆಳ್ಳಿ ಹಾಗೂ 4 ಕಂಚಿನೊಂದಿಗೆ ಒಟ್ಟು 33 ಪದಕಗಳನ್ನು ತಮ್ಮದಾಗಿಸಿಕೊಂಡರು. ಮಹಾರಾಷ್ಟ್ರ 6 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 2ನೇ ಸ್ಥಾನ ಪಡೆದುಕೊಂಡಿತು.
ಕೊನೆ ದಿನ ರಾಜ್ಯಕ್ಕೆ 5 ಚಿನ್ನ, 1 ಬೆಳ್ಳಿ, 2 ಕಂಚು ಲಭಿಸಿತು. 200 ಮೀ. ಫ್ರೀಸ್ಟೈಲ್ ಮಹಿಳಾ ವಿಭಾಗದಲ್ಲಿ ಹಶಿಕಾ ರಾಮಚಂದ್ರ 2 ನಿಮಿಷ 06.49 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಪುರುಷರ ವಿಭಾಗದಲ್ಲಿ ಅನೀಶ್ ಗೌಡ (1 ನಿಮಿಷ 52.09 ಸೆಕೆಂಡ್) ಚಿನ್ನ ಜಯಿಸಿದರು. ಪುರುಷರ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿದಿತ್ ಶಂಕರ್, ಮಹಿಳೆಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ತಾನ್ಯಾ ಷಡಕ್ಷರಿ ಚಿನ್ನ ಗೆದ್ದರು. ಪುರುಷರ 4*100 ಮೀ. ಫ್ರೀಸ್ಟೈಲ್‌ನಲ್ಲಿ ಸ್ಪರ್ಧೆಯಲ್ಲಿ ಪೃಥ್ವಿ, ಕಾರ್ತಿಕೇಯನ್, ಆಕಾಶ್ ಮಣಿ, ಶ್ರೀಹರಿ ನಟರಾಜ್ ಇದ್ದ ತಂಡ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿತು. ಮಹಿಳೆಯರ 4*100 ಫ್ರೀಸ್ಟೈಲ್‌ನಲ್ಲಿ ವಿಹಿತಾ, ಶಾಲಿನಿ, ಶಿರಿನ್, ಹಶಿಕಾ ಅವರನ್ನೊಳಗೊಂಡ ತಂಡ ಬೆಳ್ಳಿ ಪಡೆಯಿತು.
ಅನೀಶ್ ಗೌಡ, ಹಶಿಕಾ ವೈಯಕ್ತಿಕ ಚಾಂಪಿಯನ್
ಕೂಟದಲ್ಲಿ ಕರ್ನಾಟಕದ ಅನೀಶ್ ಗೌಡ ಹಾಗೂ ಹಶಿಕಾ ರಾಮಚಂದ್ರ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಹಶಿಕಾ 4 ಚಿನ್ನದ ಪದಕ ಗೆದ್ದರೆ, ಅನೀಶ್ 3 ಚಿನ್ನ, 1 ಕಂಚು ಜಯಿಸಿದ್ದಾರೆ.