ಕರ್ನಾಟಕದ ದಾಳಿಗೆ ತಮಿಳುನಾಡು ತತ್ತರ!

| Published : Feb 11 2024, 01:50 AM IST

ಸಾರಾಂಶ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್‌ಗೆ ಆಲೌಟ್‌ ಆಗಿದೆ. 2ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ತಮಿಳುನಾಡು 7 ವಿಕೆಟ್‌ಗೆ 129ರನ್‌ ಗಳಿಸಿದ್ದು, ಇನ್ನೂ 237 ರನ್‌ ಹಿನ್ನಡೆಯಲ್ಲಿದೆ.

ಚೆನ್ನೈ: ಕರ್ನಾಟಕ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ತಮಿಳುನಾಡು, ರಾಜ್ಯ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಬಿಟ್ಟುಕೊಡುವ ಆತಂಕಕ್ಕೆ ಸಿಲುಕಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್‌ ಕಲೆಹಾಕಿದ ಬಳಿಕ, ಬ್ಯಾಟಿಂಗ್‌ ಆರಂಭಿಸಿದ ತಮಿಳುನಾಡು, ಮೊದಲ ಇನ್ನಿಂಗ್ಸಲ್ಲಿ 2ನೇ ದಿನದಂತ್ಯಕ್ಕೆ 7 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿದ್ದು, ಇನ್ನೂ 237 ರನ್‌ ಹಿನ್ನಡೆಯಲ್ಲಿದೆ.

ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 288 ರನ್‌ ಗಳಿಸಿದ್ದ ಕರ್ನಾಟಕ, 2ನೇ ದಿನ ಕೊನೆಯ 5 ವಿಕೆಟ್‌ಗೆ ಕೇವಲ 78 ರನ್‌ ಕಲೆಹಾಕಿತು. ಮೊದಲ ದಿನ 151 ರನ್‌ ಗಳಿಸಿದ್ದ ದೇವದತ್‌ ಪಡಿಕ್ಕಲ್‌ ಶನಿವಾರ ಆ ಮೊತ್ತಕ್ಕೆ ಒಂದೂ ರನ್‌ ಸೇರಿಸದ ಔಟಾದರು. ಹಾರ್ದಿಕ್‌ ರಾಜ್‌ (51) ಚೊಚ್ಚಲ ಅರ್ಧಶತಕ, ಎಸ್‌.ಶರತ್‌ 45 ರನ್‌ ಗಳಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

ಬಳಿಕ ಕರ್ನಾಟಕದ ಬೌಲರ್‌ಗಳು ಅತ್ಯುತ್ತಮ ದಾಳಿ ಸಂಘಟಿಸಿ, ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಆಫ್‌ ಸ್ಪಿನ್ನರ್‌ ಶಶಿಕುಮಾರ್‌ 3, ಹಾರ್ದಿಕ್‌ 2, ವಿದ್ವತ್‌ ಹಾಗೂ ವೈಶಾಖ್‌ ತಲಾ 1 ವಿಕೆಟ್‌ ಪಡೆದಿದ್ದಾರೆ. ಬಾಬಾ ಇಂದ್ರಜಿತ್‌ 35 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ.

ಸ್ಕೋರ್‌:

ಕರ್ನಾಟಕ 366/10 (ಪಡಿಕ್ಕಲ್‌ 151, ಹಾರ್ದಿಕ್‌ 51, ಅಜಿತ್‌ 4-75), ತಮಿಳುನಾಡು 129/7 (ಬಾಬಾ 35*, ಶಶಿ 3-41)