ಸಾರಾಂಶ
3ನೇ ಆವೃತ್ತಿಯ ರಾಜ್ಯ ಮಿನಿ ಒಲಿಂಪಿಕ್ಸ್‌ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 2022ರ ಬಳಿಕ ಅಂಡರ್-14 ಕ್ರೀಡಾಕೂಟ ಆಯೋಜನೆಗೊಳ್ಳುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 5000ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು : 3ನೇ ಆವೃತ್ತಿಯ ರಾಜ್ಯ ಮಿನಿ ಒಲಿಂಪಿಕ್ಸ್‌ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 2022ರ ಬಳಿಕ ಅಂಡರ್-14 ಕ್ರೀಡಾಕೂಟ ಆಯೋಜನೆಗೊಳ್ಳುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 5000ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಿಎಂ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್, ಹಲವು ಸಚಿವರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಫುಟ್ಬಾಲ್, ಹಾಕಿ, ಕುಸ್ತಿ, ಜಿಮ್ನಾಸ್ಟಿಕ್ಸ್, ಶೂಟಿಂಗ್ ಸೇರಿದಂತೆ ಒಟ್ಟು 24 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಕಂಠೀರವ ಹೊರಾಂಗಣ, ಒಳಾಂಗಣ ಸೇರಿದಂತೆ ಬೆಂಗಳೂರಿನ ವಿವಿಧ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ನ.20ರಂದು ಕ್ರೀಡಾಕೂಟ ಮುಕ್ತಾಯಗೊಳ್ಳಲಿದ್ದು, ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಕ್ರೀಡಾಕೂಟವನ್ನು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ಹಾಗೂ ರಾಜ್ಯ ಕ್ರೀಡಾ ಇಲಾಖೆ ಜಂಟಿಯಾಗಿ ಆಯೋಜಿಸುತ್ತಿವೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಕೆಒಎ ಅಧ್ಯಕ್ಷ ಹಾಗೂ ಸಿಎಂರ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜು ಬುಧವಾರ ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಒಲಿಂಪಿಕ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಮಕ್ಕಳಿಗೆ ಉಳಿದುಕೊಳ್ಳಲು ಕಂಠೀರವ ಕ್ರೀಡಾಂಗಣದಲ್ಲಿರುವ ಕೊಠಡಿಗಳು, ವಿವಿಧ ಕ್ರೀಡಾ ಹಾಸ್ಟೆಲ್, ಹೋಟೆಲ್‌ಗಳಲ್ಲಿ ರೂಂಗಳನ್ನು ಕಾಯ್ದಿರಿಸಲಾಗಿದೆ. ಉಟೋಪಚಾರ, ಪ್ರಯಾಣ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಒಎ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು, ರಾಜ್ಯ ಕ್ರೀಡಾ ಇಲಾಖೆಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಡಿ.ರಣದೀಪ್ ಇದ್ದರು. ಸರ್ಕಾರದಿಂದ 3 ಕೋಟಿ ರು. ಅನುದಾನ
2022ರ ಬಳಿಕ ಆಯೋಜನೆಗೊಳ್ಳುತ್ತಿರುವ ಮಿನಿ ಒಲಿಂಪಿಕ್ಸ್‌ಗೆ ಕರ್ನಾಟಕ ಸರ್ಕಾರ 3 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದ ಗೋವಿಂದರಾಜು ಅವರು, ಕ್ರೀಡಾ ಇಲಾಖೆ ಸಹ ಎಲ್ಲ ನೆರವು ನೀಡುತ್ತಿದ್ದು, ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದರು. ಟಾಪ್-15 ಕ್ರೀಡಾಳುಗಳಿಗೆ
ತಲಾ ₹5000 ಬಹುಮಾನ
ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಅಗ್ರ-15 ಕ್ರೀಡಾಪಟುಗಳಿಗೆ ಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ವಿಜ್ಞಾನ ಕೇಂದ್ರದ ವತಿಯಿಂದ ತಲಾ 5000 ರು. ಬಹುಮಾನ ನೀಡಲಾಗುವುದು. ಅಲ್ಲದೇ ಉತ್ತಮ ಕೌಶಲ್ಯಗಳನ್ನು ಪ್ರದರ್ಶಿಸುವ 200 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರ ದೈಹಿಕ ಹಾಗೂ ಮಾನಸಿಕ ಬಲ ಹೆಚ್ಚಲು ತರಬೇತಿ ನೀಡಲಾಗುವುದು.
ಈ ಶಿಬಿರದಲ್ಲಿ ಗಮನ ಸೆಳೆಯುವ ಅಗ್ರ-50 ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ 1 ತಿಂಗಳು ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈ ತರಬೇತಿ ವೇಳೆ ಮಕ್ಕಳ ದೈಹಿಕ, ಮಾನಸಿಕ ಸಾಮರ್ಥ್ಯದ ಮೌಲ್ಯಮಾಪನ ನಡೆಸಿ, ಆ ವಿವರಗಳನ್ನು ಆ ಮಕ್ಕಳು ಪ್ರತಿನಿಧಿಸುವ ಕ್ರೀಡಾ ಫೆಡರೇಶನ್‌ಗಳಿಗೆ ನೀಡಲಾಗುತ್ತದೆ. ಆ ಮೂಲಕ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸಲು ನೆರವು ಒದಗಿಸಲಾಗುತ್ತದೆ ಎಂದು ಡಾ. ಗೋವಿಂದರಾಜು ತಿಳಿಸಿದರು.
ದೇಶದಲ್ಲೇ ಮಿನಿ ಒಲಿಂಪಿಕ್ಸ್ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ನಮ್ಮಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ, ಅವರನ್ನು ಗುರುತಿಸುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ತಯಾರು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ರಾಜ್ಯದ ಹೆಚ್ಚೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಆಗಬೇಕು ಎನ್ನುವುದೇ ಈ ಕ್ರೀಡಾಕೂಟದ ಮುಖ್ಯ ಉದ್ದೇಶ.
ಡಾ. ಕೆ. ಗೋವಿಂದರಾಜು, ಕೆಒಎ ಅಧ್ಯಕ್ಷ